ಬೀದರ್,ಜೂ,27,2019(www.justkannada.in): ನಮ್ಮ ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಏನು ಆಗಲ್ಲ. ನಮ್ಮ ಸರ್ಕಾರದ ಬಗ್ಗೆ ಯಾವುದೇ ಸಂಶಯ ಇಟ್ಟುಕೊಳ್ಳಬೇಡಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ನುಡಿದರು.
ಮುಖ್ಯಮಂತ್ರಿ ಎಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮಕ್ಕೆ ಕುಂದುಕೊರತೆಗಳ ಮನವೀ ಸ್ವೀಕಾರ ಮತ್ತು ಗ್ರಾಮ ವಾಸ್ತವ್ಯಕ್ಕಾಗಿ ಎತ್ತಿನ ಬಂಡಿಯ ಮೂಲಕ ಅಗಮಿಸಿದರು. ಉಜಳಂಬ ಗ್ರಾಮದ ಅಗಸಿಯಲ್ಲಿ ಆನೆಯು ಮುಖ್ಯಮಂತ್ರಿಗಳಿಗೆ ಹೂವಿನ ಹಾರ ಹಾಕುವ ಮೂಲಕ ಬರಮಾಡಿಕೊಂಡಿತು. ಈ ಸಂದರ್ಭದಲ್ಲಿ ಸಚಿವರುಗಳಾದ ಬಂಡೆಪ್ಪ ಕಾಶಂಪುರ, ರಹೀಂ ಖಾನ್, ರಾಜಶೇಖರ್ ಪಾಟೀಲ್, ಶಾಸಕರುಗಳಾದ ಬಿ. ನಾರಾಯಣ್, ಈಶ್ವರ ಖಂಡ್ರೆ, ಎಂ.ಎಲ್. ಸಿ. ವಿಜಯಸಿಂಗ ಇದ್ದರು.
ಗ್ರಾಮವಾಸ್ತವ್ಯ ವೇದಿಕೆಗೆ ಆಗಮಿಸಿ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಿಮ್ಮ ಕಷ್ಟಗಳಿಗೆ ಸ್ಪಂದಿಸಲು ಗ್ರಾಮವಾಸ್ತವ್ಯ ಮಾಡುತ್ತಿದ್ದೇವೆ. ಗ್ರಾಮವಾಸ್ತವ್ಯದ ಮೂಲಕ ಹಲವು ಸಮಸ್ಯೆಗಳನ್ನ ಬಗೆಹರಿಸಬಹುದು. ರಸ್ತೆ ನಿರ್ಮಾಣ, ಗುಣಮಟ್ಟದ ಒಳಚರಂಡಿ ನಿರ್ಮಾಣ, ವಿದ್ಯುತ್ ದೀಪ ಅಳವಡಿಕೆ ಮುಂತಾದ ಕಾಮಗಾರಿಗಳಿಗಾಗಿ ಉಜಳಂಬ ಗ್ರಾಮಕ್ಕೆ 32 ಕೋಟಿ ಅನುದಾನ ನೀಡುತ್ತೇವೆ ಎಂದು ಘೋಷಣೆ ಮಾಡಿದರು.
ಹಾಗೇಯೇ ಬೀದರ್ ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್ ನಲ್ಲಿದ್ದ ರೈತರ ಸುಮಾರು 1045 ಕೋಟಿ. ರೂ ಸಾಲಮನ್ನಾ ಆಗಿದೆ. ಬೀದರ್ ಜಿಲ್ಲೆಗೆ 2 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಜಿಲ್ಲೆಗೆ ನೀರಾವರಿಯೋಜನೆಗಳಿಗೆ 800 ಕೋಟಿ ಅನುದಾನ ನೀಡಲಾಗುತ್ತದೆ. ಗೋದಾವರಿಯಿಂದ ನೀರು ತರಲು ಚಿಂತನೆ ನಡೆಸಲಾಗಿದೆ. ಮುಂದಿನ ನಾಲ್ಕು ಐದು ತಿಂಗಳಲ್ಲಿ ನಿಮಗೆ ಯೋಜನೆಗಳು ಕಾಣುತ್ತವೆ. ಇನ್ನು ಬಾಲ್ಕಿ , ಬಸವಕಲ್ಯಾಣ ಕ್ಷೇತ್ರಗಳಿಗೆ ನೀರಾವರಿ ಯೋಜನೆಗಳಿಗೆ 75 ಕೋಟಿ ರೂ ಅನುದಾನ ನೀಡಲಾಗುತ್ತದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಹೈದರಬಾದ್ –ಕರ್ನಾಟಕ ಭಾಗದ ಶಾಲೆಗಳ ದುರಸ್ತಿ ನಿರ್ಮಾಣಕ್ಕೆ ಹಾಗೂ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಭಾಗದ ಜನರ ನೀರಾವರಿ ಸಮಸ್ಯೆ ಗಮನಕ್ಕೆ ಬಂದಿದೆ ಎಂದು ಸಿಎಂ ತಿಳಿಸಿದರು.
ಹಾಗೆಯೇ ಗ್ರಾಮವಾಸ್ತವ್ಯ ಟೀಕಿಸಿದ ಬಿಜೆಪಿಗೆ ಟಾಂಗ್ ಕೊಟ್ಟ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಜನರ ಸಮಸ್ಯೆ ಆಲಿಸಿದರೇ ನಿಮಗೆ ಗೊತ್ತಾಗುತ್ತದೆ. ನಮ್ಮ ಸರ್ಕಾರ ಯಾವುದೋ ಒಂದು ಜಿಲ್ಲೆಗೆ ಸೀಮಿತವಾಗಿಲ್ಲ. ನಮ್ಮ ಸರ್ಕಾರ ಐದು ವರ್ಷ ಸುಭದ್ರ. ಸರ್ಕಾರಕ್ಕೆ ಏನು ಆಗಲ್ಲ. ನಮ್ಮ ಸರ್ಕಾರದ ಬಗ್ಗೆ ಸಂಶಯ ಇಟ್ಟುಕೊಳ್ಳಬೇಡಿ ಎಂದು ಹೇಳಿದರು.
Key words: 32 crore- Ujalamba –village- Grants- CM HD Kumaraswamy -gramavastavya