ಬೆಂಗಳೂರು,ಫೆಬ್ರವರಿ,17,2023(www.justkannada.in): ಇಂದು ರಾಜ್ಯ ಬಜೆಟ್ ಮಂಡನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣಕ್ಕೆ 320 ಕೋಟಿ ರೂ ಹಾಗೂ ಬೆಂಗಳೂರು ಉಪನಗರ ರೈಲಿಗೆ ರಾಜ್ಯದಿಂದ 1 ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ.
ಈ ಕುರಿತು ಬಜೆಟ್ ಮಂಡನೆಯಲ್ಲಿ ಪ್ರಸ್ತಾಪಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ವಿಮಾನ ನಿಲ್ದಾಣವನ್ನು ಉನ್ನತೀಕರಿಸಲು ಭೂ ಸ್ವಾಧೀನಕ್ಕಾಗಿ ಕ್ರಮ ವಹಿಸಲಾಗಿದ್ದು, ಇದಕ್ಕಾಗಿ 320 ಕೋಟಿ ರೂ. ಗಳಷ್ಟು ಹಂಚಿಕೆ ಮಾಡಲಾಗಿದೆ. ಇನ್ನು 15,767 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಹಾಗೂ ರೈಲ್ವೆ ಸಚಿವಾಲಯ ಹಸಿರು ನಿಶಾನೆ ನೀಡಿದೆ. ಈಗಾಗಲೇ ಮೊದಲನೆ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು ಈ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ 1,350 ಕೋಟಿ, ರಾಜ್ಯ ಸರ್ಕಾರದಿಂದ 1 ಸಾವಿರ ಕೋಟಿ ಅನುದಾನ ದೊರೆಯಲಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ ಚಿಕ್ಕಬಾಣಾವರ ಮತ್ತು ಬೈಯಪ್ಪನಹಳ್ಳಿ ನಡುವಿನ ಕಾರಿಡಾರ್ 2ರ ಕಾಮಗಾರಿಗಳಿಗೆ 860 ಕೋಟಿ ರೂ. ಮೊತ್ತಕ್ಕೆ ಕಾರ್ಯಾದೇಶ ನೀಡಿದ್ದು ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ, ಹೊಸ ಟಿಂಡರ್ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿ ಸ್ಪರ್ಧಾತ್ಮಕ ಬಿಡ್ ಪಕ್ರಿಯೆ ಮೂಲಕ ಪಿಪಿಪಿ ಮಾದರಿಯಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದರು.
Key words: 320 Crores –Mysore- Airport –Upgradation-cm bommai-Budget