ಮೈಸೂರು,ಅ,1,2020(www.justkannada.in): ಕುರುಬಾರಹಳ್ಳಿ ಸರ್ವೆ ನಂ 4 ಜಮೀನು ವಿವಾದ ಸಂಬಂಧ ಒಟ್ಟಾರೆ 354.29 ಎಕರೆ ಪ್ರದೇಶವನ್ನು ಬಿ ಖರಾಬಿನಿಂದ ಮುಕ್ತಗೊಳಿಸಲಾಗಿದೆ ಎಂದು ಶಾಸಕ ಎಸ್.ಎ ರಾಮದಾಸ್ ಮಾಹಿತಿ ನೀಡಿದರು.
ಕುರುಬಾರಹಳ್ಳಿ ಸರ್ವೆ ನಂ 4 ರ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ಕಂದಾಯ ಇಲಾಖೆಯಿಂದ ಬಿ ಖರಾಬಿನಿಂದ ತೆಗೆದುಹಾಕಿರುವ ಆದೇಶ ಪತ್ರವನ್ನು ನೀಡಲಾಗಿದೆ. ಒಟ್ಟಾರೆ 354.29 ಎಕರೆ ಪ್ರದೇಶವನ್ನು ಬಿ ಖರಾಬಿನಿಂದ ಮುಕ್ತಗೊಳಿಸಲಾಗಿದೆ. ಇಷ್ಟು ವರ್ಷಗಳ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ. ಆ ಭಾಗದ ನಿವಾಸಿಗಳು ಸೋಮವಾರದಿಂದ ಖಾತೆ ಬದಲಾವಣೆಯ ವಿಷಯವಾಗಿ ನಗರ ಪಾಲಿಕೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಬಡಾವಣೆಗೆ ಸಂಬಂಧಿಸಿದ ಖಾತೆ , ಖಾತೆ ದೃಢೀಕರಣ ಪತ್ರ, ನಕ್ಷೆ ಅನುಮೋದನೆ, ಕಂದಾಯ ನಿಗದಿಪಡಿಸುವುದು, ಸಿ.ಆರ್.ವರದಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ಹಾಗೂ ಮುಡಾ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಈ ಸಂಬಂಧ ಯಾವುದೇ ಗೊಂದಲಗಳಿದ್ದಲ್ಲಿ ಶಾಸಕರ ಕಛೇರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದಕೊಳ್ಳಬಹುದು ಎಂದು ಶಾಸಕ ರಾಮದಾಸ್ ಸಲಹೆ ನೀಡಿದರು.
ಬ್ರಾಹ್ಮಣರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಗೊಂದಲ ಕುರಿತು ಸ್ಪಷ್ಟನೆ….
ಬ್ರಾಹ್ಮಣರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವ ಕುರಿತು ಮಾತನಾಡಿದ ಶಾಸಕ ರಾಮದಾಸ್, ಈ ಹಿಂದೆ ಬ್ರಾಹ್ಮಣರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಆದೇಶ ನೀಡಲಾಗಿತ್ತು. ಜಾತಿ ಮತ್ತು ಆದಾಯ ಪ್ರಮಾಣ ನೀಡುವ ಕುರಿತು ತಂತ್ರಾಂಶದಲ್ಲಿನ ಗೊಂದಲಿಗಳಿಂದ ಪ್ರಮಾಣಪತ್ರ ನೀಡುವಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯದ ನಿರ್ದೇಶಕರಿಗೆ ಈ ಕುರಿತ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿದೆ. ಇದರ ಕುರಿತು ಶೀಘ್ರವೇ ಆದೇಶ ಹೊರಬೀಳಲ್ಲಿದ್ದು ಆಗಸ್ಟ್ 5 ರಿಂದ ರಾಜ್ಯದಲ್ಲಿನ ಎಲ್ಲಾ ಬ್ರಾಹ್ಮಣ ಜಾತಿಗೆ ಸೇರಿದವರು ಆಯಾ ನಾಡ ಕಛೇರಿಗಳಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಪಡೆಯಬಹುದು ಎಂದು ತಿಳಿಸಿದರು.
Key words: 354.29 Acres -B Kharabu- Free –MLA- SA Ramdas