ಬೆಂಗಳೂರು,ಸೆಪ್ಟಂಬರ್,16,2020(www.justkannada.in): ಭಾರತದಲ್ಲಿ ಸಹಕಾರಿ ಚಳುವಳಿ ಹೆಮ್ಮರವಾಗಿ ಬೆಳೆದಿದೆ. ಬಡವರಿಗೆ, ಹೆಣ್ಣುಮಕ್ಕಳಿಗೆ, ರೈತರಿಗೆ ಸಹಕಾರಿಯಾಗಿ ನಿಂತಿದೆ. ಕೃಷಿ ಹಾಗೂ ಕೃಷಿಯೇತರ ಕ್ಷೇತ್ರಕ್ಕೆ 39,300 ಕೋಟಿ ರೂಪಾಯಿ ಸಾಲವನ್ನು ನೀಡಲು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸಹಕಾರ ಇಲಾಖೆ ವತಿಯಿಂದ ಕೋವಿಡ್ 19 ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಆರ್ಥಿಕ ಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದರು.
ಕೋವಿಡ್ 19 ರ ಸಂಕಷ್ಟಗಳ ಕಾಲದಲ್ಲಿ ಸಹಕಾರ ಇಲಾಖೆ ವತಿಯಿಂದ 53 ಕೋಟಿ ರೂ. ದೇಣಿಗೆ ನೀಡಿರುವುದಕ್ಕೆ ಸಹಕಾರ ಸಚಿವರಾದ ಸೋಮಶೇಖರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೈನುಗಾರಿಕೆ, ಮೀನುಗಾರಿಕೆ ಸಾಲಕ್ಕಾಗಿ 2020-21 ನೇ ಸಾಲಿನಲ್ಲಿ 38 ಸಾವಿರ ಜನರಿಗೆ 100 ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಈವರೆಗೆ 34,927 ಜನರಿಗೆ 60.30 ಕೋಟಿ ರೂ. ವಿತರಿಸಲಾಗಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.
ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಮಾತನಾಡಿ, ಕೋವಿಡ್ 19 ರ ಸನ್ನಿವೇಶದಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಆತ್ಮನಿರ್ಭರ ಭಾರತ ಯೋಜನೆಯಡಿ 20 ಲಕ್ಷ ಕೋಟಿ ರೂಪಾಯಿಯನ್ನು ಕೊಟ್ಟಿದ್ದಾರೆ. ಇನ್ನು ಸಣ್ಣ, ಮಧ್ಯಮ ಹಾಗೂ ಅತಿ ಸಣ್ಣ ರೈತರಿಗೆ ಸಾಲ ನೀಡಬೇಕು ಎಂಬ ನಿಟ್ಟಿನಲ್ಲಿ ಈಗ ಆರ್ಥಿಕ ಸ್ಪಂದನ ಕಾರ್ಯಕ್ರಮದಡಿ ಸುಮಾರು 39 ಸಾವಿರ ಕೋಟಿ ರೂಪಾಯಿ ನೀಡುವ ಯೋಜನೆಗೆ ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಯೋಜನೆಯಡಿ ನಾಲ್ಕು ವಲಯಗಳಲ್ಲಿ ವಿತರಣೆ ಮಾಡಲಾಗುತ್ತಿದ್ದು, ಮೊದಲಿಗೆ ಬೆಂಗಳೂರು ವಲಯದಲ್ಲಿ ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ರೈತರನ್ನು ಆರ್ಥಿಕ ಸಬಲರನ್ನಾಗಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಮೂರು ವಲಯಗಳಿಗೆ ಈ ಯೋಜನೆಯಡಿ ಸಾಲವನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಕುಡಿಯುವ ಹಾಲು ವಿತರಣೆ ಮಾಡಲು 79 ಕೋಟಿಯನ್ನು ಕೆಎಂಎಫ್ ಗೆ ಬಿಡುಗಡೆ ಮಾಡಿದ್ದೇವೆ. ಇನ್ನು ರೈತರಿಗೂ ಸಹ ಸಾಲ ಕೊಡುವ ಕೆಲಸವನ್ನು ಮಾಡುತ್ತಿದ್ದೇವೆ. 15,300 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ಇದ್ದು, ಈವರೆಗೆ 12.11 ಲಕ್ಷ ರೈತರಿಗೆ 7929.30 ಕೋಟಿ ರೂಪಾಯಿ ಸಾಲವನ್ನು ಶೂನ್ಯ ಹಾಗೂ ಶೇ. 3ರ ಬಡ್ಡಿದರದಲ್ಲಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ 53 ಕೋಟಿ ರೂಪಾಯಿ ದೇಣಿಗೆಯನ್ನು ಸಹಕಾರ ವಲಯ ಹಾಗೂ ಎಪಿಎಂಸಿಗಳ ಮೂಲಕ ಸಂಗ್ರಹಿಸಿ ಕೊಟ್ಟಿದ್ದೇನೆ. ಜೊತೆಗೆ ಕೊರೋನಾ ವಾರಿಯರ್ಸ್ ಗಳಾದ 12,608 ಆಶಾ ಕಾರ್ಯಕರ್ತೆಯರಿಗೆ 12.75 ಕೋಟಿ ರೂ. ಪ್ರೋತ್ಸಾಹಧನವನ್ನು ವಿತರಣೆ ಮಾಡಿದ್ದೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
1885 ಕೋಟಿ ರೂಪಾಯಿ ಅನುದಾನವನ್ನು ಕೆಎಂಎಫ್ ನಡಿ ತಲಾ 5 ರೂ.ನಂತೆ ಪ್ರೋತ್ಸಾಹಧನ ಕೊಡುವ ಕೆಲಸವನ್ನು ಮಾನ್ಯ ಮುಖ್ಯಮಂತ್ರಿಗಳು ಮಾಡಿದ್ದಾರೆ. ರೈತರ ಹಾಗೂ ಜನರ ಅಭ್ಯುದಯಕ್ಕೆ ದುಡಿಯುತ್ತಿದ್ದಾರೆ ಎಂದು ಸಚಿವರಾದ ಎಸ್ ಟಿ ಎಸ್ ತಿಳಿಸಿದರು.
ಹೈನುಗಾರರಿಗೆ ಹಾಗೂ ಮೀನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ 2 ಲಕ್ಷ ರೂ. ಸಾಲ ಕೊಡುವ ಯೋಜನೆಯನ್ನು ಹೊಸದಾಗಿ ಪ್ರಾರಂಭಿಸಲಾಗಿದೆ. ಈ ಎಲ್ಲ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುಂದಾಗಿದ್ದೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಸಾಕ್ಷ್ಯಚಿತ್ರ ಅನಾವರಣ
ಇದೇ ಸಂದರ್ಭದಲ್ಲಿ ಆರ್ಥಿಕ ಸ್ಪಂದನಾ ಕಾರ್ಯಕ್ರಮದ ಸಾಕ್ಷ್ಯಚಿತ್ರವನ್ನು ಅನಾವರಣಗೊಳಿಸಲಾಯಿತು. ಈ ಮೂಲಕ ಸಹಕಾರ ವಲಯದ ಮೂಲಕ ಯಾವೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರಿಗೆ ಯಾವೆಲ್ಲ ಯೋಜನೆಗಳಡಿ ಎಷ್ಟು ಸಾಲ ಕೊಡಲಾಗಿದೆ. ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಕೈಗೊಂಡ ಪ್ರವಾಸ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಕೊಡಲಾಗಿದೆ.
ಸಾಂಕೇತಿಕ ಸಾಲ ವಿತರಣೆ
ಆರ್ಥಿಕ ಸ್ಪಂದನ ಕಾರ್ಯಕ್ರಮದಡಿ ವಿವಿಧ ಯೋಜನೆಯಲ್ಲಿ 50 ಫಲಾನುಭವಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಂಕೇತಿಕವಾಗಿ ಸಾಲದ ಚೆಕ್ ಅನ್ನು ವಿತರಣೆ ಮಾಡಿದರು.
ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸಂಗಪ್ಪ ಸವದಿ, ಅಶ್ವಥ್ ನಾರಾಯಣ, ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಡಾ. ರಾಜೇಂದ್ರ ಕುಮಾರ್, ಸಹಕಾರ ಸಂಘಗಳ ನಿಬಂಧಕರಾದ ಎಸ್.ಜಿಯಾವುಲ್ಲ ಉಪಸ್ಥಿತರಿದ್ದರು.
Key words: 39,300 crore -loan – agriculture – non-agricultural- sector- CM Yeddyurappa