ಬೆಂಗಳೂರು, ಆಗಸ್ಟ್,30,2021(www.justkannada.in): ರಾಜ್ಯದಲ್ಲಿ 4 ಕೋಟಿ ಡೋಸ್ ಕೊವಿಡ್ ಲಸಿಕೆ ನೀಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ 2 ಡೋಸ್ ನೀಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಗ್ರಾಮೀಣ ಭಾಗದಲ್ಲಿ ಲಸಿಕೆ ನೀಡಿಕೆ ಸ್ವಲ್ಪ ಕಡಿಮೆಯಾಗಿದೆ. ಗ್ರಾಮೀಣ ಭಾಗದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಕೊಳಗೇರಿ ನಿವಾಸಿಗಳಿಗೆ ವಿಶೇಷ ಲಸಿಕಾ ಮೇಳ ಪ್ರತಿನಿತ್ಯ ಹಮ್ಮಿಕೊಳ್ಳುವ ಕಾರ್ಯತಂತ್ರ ರೂಪಿಸಿದ್ದೇವೆ. ಇನ್ನು ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ಸಿಕ್ಕ ಬಳಿಕ ಅವರಿಗೂ ಲಸಿಕೆ ನೀಡ್ತೇವೆ. ಮೊದಲ, 2ನೇ ಡೋಸ್ ಮಧ್ಯೆ ಸ್ವಲ್ಪ ತಾಂತ್ರಿಕ ಸಮಸ್ಯೆ ಇದೆ ಎಂದು ತಿಳಿಸಿದರು.
ಕೇರಳದಲ್ಲಿ ದಿನಕ್ಕೆ 20 ಸಾವಿರ ಕೊರೊನಾ ಕೇಸ್ ಬರುತ್ತಿದೆ. ಆದರೆ ಬೆಂಗಳೂರಿನಲ್ಲಿ 400ರಿಂದ 500 ಕೇಸ್ ಸಹ ಬರ್ತಿಲ್ಲ. ಬಿಬಿಎಂಪಿ ಸೂಕ್ತ ಕ್ರಮ ಕೈಗೊಂಡಿದ್ದರಿಂದ ಕೊರೋನಾ ನಿಯಂತ್ರಣವಾಗಿದೆ. ಜನರು ಸಹಕಾರ ಕೊಟ್ಟಿದ್ದರಿಂದ ಇದು ಸಾಧ್ಯವಾಗಿದೆ. ಕೆಲವು ರಾಜ್ಯಗಳಲ್ಲಿ ಕೊರೊನಾ 3ನೇ ಅಲೆ ಆರಂಭವಾಗಿದೆ. ನಮ್ಮ ರಾಜ್ಯದಲ್ಲಿ 3ನೇ ಅಲೆಯಿಂದ ಸಮಸ್ಯೆಯಾಗಬಾರದು. ಹೀಗಾಗಿ ನಾವು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಜನರು ಸಹಕಾರ ಕೊಟ್ಟಾಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.
Key words: 4 crore –dose- covid vaccine – state- Health Minister -Dr. K. Sudhakar.