ತುಮಕೂರು,ಮೇ,23,2023(www.justkannada.in): 40% ಕಮಿಷನ್ ಆರೋಪ ಸಾಬೀತು ಪಡಿಸುವಂತೆ ಹೇಳಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿರುವ ಸಚಿವ ಎಂ.ಬಿ ಪಾಟೀಲ್, 40% ಕಮಿಷನ್ ಆರೋಪಕ್ಕೆ ಮಾಡಾಳ್ ವಿರೂಪಾಕ್ಷಪ್ಪ, ಎಡಿಜಿಪಿ ಅಮೃತ್ ಪೌಲ್ ಅವರೇ ಸಾಕ್ಷಿ ಎಂದು ಟಾಂಗ್ ನೀಡಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ಬಳಿಕ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ , ನನಗೆ ಇದೊಂದು ಅತ್ಯಂತ ಪೂಜ್ಯನೀಯ ಶ್ರೇಷ್ಠ ಪವಿತ್ರ ಕ್ಷೇತ್ರ. ನಾನು ಸಚಿವನಾದ ಮೇಲೆ ಶಾಸಕನಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದೇನೆ. ಮುಖ್ಯಮಂತ್ರಿಗಳಿಗೆ ಸಿದ್ದಗಂಗಾ ಮಠಕ್ಕೆ ಹೋಗ್ತಿನಿ ಅಂತ ಹೇಳಿ ಬಂದಿದ್ದೇನೆ. ಶ್ರೀಗಳ ಗದ್ದುಗೆ ಅಶಿರ್ವಾದ ಪಡೆದು ಪೂಜ್ಯ ಸ್ವಾಮೀಜಿಗಳ ಅಶಿರ್ವಾದ ಪಡೆದಿದ್ದೇನೆ. ರಾಜ್ಯದ ಜನರ ಸೇವೆ ಮಾಡಲಿಕ್ಕೆ ಶಕ್ತಿಯನ್ನ ಕೊಡಲಿ ಅಂತ ಪ್ರಾರ್ಥನೆ ಮಾಡಿದ್ದೇನೆ ಎಂದರು.
ತಾವು ಡಿಸಿಎಂ ಸ್ಥಾನದ ಆಕಾಂಕ್ಷಿ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್, ರಾಜಕಾರಣದಲ್ಲಿ ಕೆಲವೊಂದು ಅನಿವಾರ್ಯತೆಗಳು ಇರುತ್ತವೆ. ಹೀಗಾಗಿ ಪಕ್ಷ ನಿರ್ಧಾರ ಮಾಡಿದಾಗೇ ಆ ನಿರ್ಧಾರಕ್ಕೆ ನಾವು ಒಪ್ಪಿಗೆ ಸೂಚಿಸ ಬೇಕಾಗುತ್ತದೆ. ಇದೇ ಅಂತ್ಯ ಅಂತಲ್ಲ, ಕೆಲವರಿಗೆ ಮನವರಿಕೆ ಮಾಡ್ತಾರೆ. ಈ ಬಾರಿ ಲಿಂಗಾಯತರು ಬಹಳ ದೊಡ್ಡ ಪ್ರಮಾಣದಲ್ಲಿ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ನಾನು ಯಾವುದೇ ಖಾತೆ ಬೇಕು ಅಂತ ಕೇಳಿಲ್ಲ. ಪರಮಾಧಿಕಾರ ಮುಖ್ಯಮಂತ್ರಿಗಳದ್ದು ಎಂದರು.
40% ಕಮಿಷನ್ ಆರೋಪ ಸಾಬೀತು ಪಡಿಸುವಂತೆ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂಬಿ ಪಾಟೀಲ್, 40% ಕಮಿಷನ್ ಆರೋಪ ಮಾಡಿದ್ದು ಕಾಂಗ್ರೆಸ್ ಪಕ್ಷ ಅಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ. ಪ್ರಧಾನಮಂತ್ರಿಗಳಿಗೆ ಒಂದು ಕೇಳುತ್ತೇನೆ. ಎಲ್ಲಾ ಕಡೆ ಐಟಿ, ಇಡಿ ರೈಡ್ ,ಸಿಬಿಐ ತನಿಖೆ ಮಾಡಿಸ್ತಾರೆ. ಕಳೆದ ಎರಡು ವರ್ಷದಿಂದ ಈ ಕಮಿಷನ್ ಪ್ರಕರಣದಲ್ಲಿ ಯಾವುದೇ ಉತ್ತರ ಇಲ್ಲ. ಇದರಲ್ಲಿ ಭಾಗಿಯಾದವರ ಬಗ್ಗೆ ತನಿಖೆ ಮಾಡಿಸಿದ್ದಾರಾ, ಇಲ್ಲ.. ಬೊಮ್ಮಾಯಿ ಅವರು ಸಾಕ್ಷಿ ಕೊಡಿ ಅಂತಾರೆ. ಅವರದ್ಧೇ ಪಕ್ಷದ ನಿಗಮದ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಕಂತೆ ಕಂತೆ 9ರಿಂದ 10 ಕೋಟಿ ಹಣ ಸಿಗುತ್ತೆ. ಇದಕ್ಕಿಂತ ದೊಡ್ಡ ಸತ್ಯ ಬೇಕಾ ನಿಮಗೆ..? ಎಂದು ಕುಟುಕಿದರು.
ತನಿಖೆ ಮಾಡ್ತಿವಿ, ತನಿಖೆ ಮಾಡಿದಾಗ ಗೊತ್ತಾಗುತ್ತೆ. ನಿಮಗೆ ಇನ್ನೊಂದು ದಾಖಲೆ ಬೇಕಾ. ಪಿಎಸ್ ಐ ನೇಮಕಾತಿಯಲ್ಲಿ ಪೊಲೀಸ್ ಎಡಿಜಿಪಿ ಅಮೃತ ಪೌಲ್ ಅರೆಸ್ಟ್ ಆಗಿದ್ದಾರೆ. ಏನು ಇಲ್ಲದೇ ಅವರನ್ನ ಬೊಮ್ಮಾಯಿ ಅವರು ಜೈಲಿಗೆ ಹಾಕಿದ್ರಾ.. ಲಕ್ಷಾಂತರ ಜನರ ಲೈಫ್ ಹಾಳು ಮಾಡಿದ್ದೀರಿ. ನಾನು ಗೃಹ ಮಂತ್ರಿಯಾಗಿದ್ದೆ, ಆಗ ಔರದ್ಕರ್ ಇದ್ದರು ಪಾರದರ್ಶಕವಾಗಿ ಕೆಲಸ ಮಾಡಿದ್ದರು. ಇವರಿಗೆ ಯಾಕೆ ಬರ್ಲಿಲ್ಲ ಅದು.
ಎಲ್ಲಿಯೂ ಕೂಡಾ ಒಂದು ಆಪಾದನೆ ಬರಲಿಲ್ಲ. 40% ಕಮಿಷನ್ ಆರೋಪಕ್ಕೆ ಮಾಡಾಳ್, ಎಡಿಜಿಪಿ ಅಮೃತ್ ಪೌಲ್, ಅವರೇ ಸಾಕ್ಷಿ. ನೀರಾವರಿ ಇಲಾಖೆ, ಬೆಂಗಳೂರು ಡೆವಲಪ್ಮೆಂಟ್, ಪಿಡಬ್ಲ್ಯುಡಿ, ಯಾವ್ಯಾವ ಇಲಾಖೆಯಲ್ಲಿ ನೇಮಕಾತಿ, ಕಾಮಗಾರಿಗಳಲ್ಲಿ ಕೆಲವೊಂದು ಕಡೆ. 100 ಕೋಟಿ ಇದ್ರೆ 150 ಹಾಕಿ ಎಸ್ಟಿಮೇಶನ್ ಜಾಸ್ತಿ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಇದೆಲ್ಲವನ್ನ ನಾವು ತನಿಖೆ ಮಾಡಿಸ್ತೇವೆ ಎಂದು ಎಂ.ಬಿ ಪಾಟೀಲ್ ಹೇಳಿದರು.
Key words: 40% commission- allegation-Bommai- Minister -MB Patil