ಬೆಂಗಳೂರು, ಜುಲೈ 19, 2021 (www.justkannada.in): ಕರ್ನಾಟಕ ರಾಜ್ಯ ಮೀಸಲು ಪಡೆಯ (ಕೆಎಸ್ಆರ್ಪಿ) 400ಕ್ಕೂ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗಳು ದೈಹಿಕ ಸಾಮರ್ಥ್ಯ ಅಂದಾಜಿಸುವ ನಿಯಮದಡಿ ಕೇವಲ ಎರಡು ತಿಂಗಳಲ್ಲಿ ಬೊಜ್ಜು ಕರಿಗಿಸಿ ಗಮನ ಸೆಳೆದಿದ್ದಾರೆ. ಅವರ ಈ ಪ್ರಯತ್ನಕ್ಕೆ ಹಿರಿಯ ಅಧಿಕಾರಿಗಳು ಶ್ಲಾಘಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಕೆಎಸ್ ಆರ್ಪಿ ದೈಹಿಕ ವ್ಯಾಯಾಮದ ನಿಯಮವೊಂದನ್ನು ಜಾರಿಗೊಳಿಸಿ, ಹೆಚ್ಚು ತೂಕ/ ಬೊಜ್ಜು ಇದ್ದಂತಹ ಸುಮಾರು 1000ಕ್ಕೂ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗಳಿಗೆ ತೂಕ ಕಡಿಮೆಗೊಳಿಸಿಕೊಳ್ಳಲು ನಿರ್ದೇಶಿಸಿತು. ನೀಡಿರುವ ಕಾಲಾವಕಾಶದ ಒಳಗೆ ಸಿಬ್ಬಂದಿಗಳು ತಮ್ಮ ದೈಹಿಕ ಸಾಮರ್ಥ್ಯವನ್ನು ಸರಿದೂಗಿಸಲು ಕೆಎಸ್ಆರ್ಪಿ, ದೈಹಿಕ ತರಬೇತಿ ಹಾಗೂ ಡಯಟಿಷಿಯನ್ ಗಳ ಸೇವೆಗಳ ಜೊತೆಗೆ ಅಗತ್ಯ ಬೆಂಬಲವನ್ನು ಒದಗಿಸಿತು.
ಈ ಪ್ರಯತ್ನ ಈಗ ಫಲ ನೀಡಿದ್ದು, ಒಟ್ಟು 1000 ಸಿಬ್ಬಂದಿಗಳ ಪೈಕಿ 400 ಸಿಬ್ಬಂದಿಗಳು ಕನಿಷ್ಠ 10 ಕೆಜಿ ತೂಕ ಕಡಿಮೆಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಎಸ್ಆರ್ಪಿ ಹೆಚ್ಚುವರಿ ಪೊಲೀಸ್ ನಿರ್ದೇಶಕ ಅಲೋಕ್ ಕುಮಾರ್ ಅವರ ಪ್ರಕಾರ, ಸುಮಾರು 100 ಅಧಿಕಾರಿಗಳು ಧೂಮಪಾನ ಹಾಗೂ ಮದ್ಯಪಾನವನ್ನು ತೊರೆದಿದ್ದಾರಂತೆ. ಶುಕ್ರವಾರ ಕೆಎಸ್ ಆರ್ಪಿ ಕೋರಮಂಗಲದಲ್ಲಿ ನಡೆಸಿದಂತಹ ಪರೇಡ್ ನಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಂತಹ ಸಿಬ್ಬಂದಿಗಳಿಗೆ ಪ್ರಶಂಸಾ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಪೆರೇಡ್ ನಂತರ ಅಲೋಕ್ ಕುಮಾರ್ ಅವರು ಖುದ್ದಾಗಿ ಕೆಎಸ್ ಆರ್ಪಿಯ ಮುಂಚೂಣಿ ಯೋಜನೆಗಳ ಮೌಲ್ಯಮಾಪನವನ್ನು ನಡೆಸಿದರು.
“ರಾಜ್ಯ ಪೊಲೀಸ್ ಪಡೆಯಲ್ಲಿ ಕೆಎಸ್ ಆರ್ಪಿ ಬಹಳ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ನಾವು ಹಲವು ಸಿಬ್ಬಂದಿಗಳನ್ನು ಕಳೆದುಕೊಂಡೆವು. ಇದರಿಂದಾಗಿ ಪಾಠವನ್ನೂ ಕಲಿತಂತಾಯಿತು. ಉಳಿದ ಸಿಬ್ಬಂದಿಗಳ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಹೆಚ್ಚಿಸುವುದು ನಮ್ಮ ಸವಾಲಾಗಿತ್ತು. ಈಗ ಎಲ್ಲರೂ ತಮ್ಮ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ಮನಗೊಂಡಿದ್ದು, ಸ್ವತಃ ಹಾಗೂ ಅವರ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತಾಗಿರುವುದು ನನಗೆ ವೈಯಕ್ತಿಕವಾಗಿ ಬಹಳ ಸಂತೋಷ ತಂದಿದೆ,” ಎನ್ನುತ್ತಾರೆ ಅಲೋಕ್ ಕುಮಾರ್.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: 400 KSRP -Staff – Obesity- 100 Staff – tobacco -alcohol.