ಬೆಂಗಳೂರು,ಡಿಸೆಂಬರ್,5,2020(www.justkannada.in): 400 ಚಿರತೆ ಉಗುರುಗಳು, ಆರು ಹುಲಿ ಉಗುರುಗಳು, ಒಂದು ಕೃಷ್ಣಮೃಗ, ಒಂದು ನರಿಯ ಚರ್ಮ, ಏಳು ಪ್ಯಾಂಗೊಲಿನ್ ಉಗುರುಗಳು, ಎರಡು ಕಾಡು ಬೆಕ್ಕುಗಳ ಉಗುರುಗಳು ಹಾಗೂ ಮೂರು ಕರಡಿಗಳ ಉಗುರಗಳನ್ನು ಸಾಗಿಸುತ್ತಿದ್ದಂತಹ, ಓರ್ವ ಮಹಿಳೆ ಸೇರಿದಂತೆ ಒಟ್ಟು ನಾಲ್ಕು ಆರೋಪಿಗಳನ್ನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಮೈಸೂರಿನ ಪ್ರಶಾಂತ್ ಕುಮಾರ್ ಹಾಗೂ ಕಾರ್ತಿಕ್ ಮತ್ತು ಆಂಧ್ರ ಪ್ರದೇಶದ ಪ್ರಮಿಳಾ ರೆಡ್ಡಿ ಹಾಗೂ ಸಾಯಿ ಕುಮಾರ್ ಎಂದು ಗುರುತಿಸಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಅವರ ಪ್ರಕಾರ ಆರೋಪಿಗಳು ಬೆಂಗಳೂರಿನ ಬನಶಂಕರಿಯಲ್ಲಿರುವ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ಖರೀದಿದಾರರಿಗಾಗಿ ಕಾಯುತ್ತಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಶಕ್ಕೆ ಪಡೆದುಕೊಂಡ ಎಲ್ಲಾ ವನ್ಯಜೀವಿಗಳ ಪದಾರ್ಥಗಳನ್ನು ಬಂಡಿಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶಗಳಿಂದ ತರಲಾಗಿರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ. ಆದರೆ ಕೃಷ್ಣಮೃಗ ಈ ಪ್ರದೇಶದಲ್ಲಿ ಇಲ್ಲ. ಇವುಗಳು ತುಮಕೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಣಸಿಗುತ್ತವೆ. ಹಾಗಾಗಿ, ಆರೋಪಿಗಳು, ಇವುಗಳನ್ನು ಆ ಪ್ರದೇಶಗಳಿಂದ ಅಥವಾ ಆಂಧ್ರ ಪ್ರದೇಶದ ಗಡಿ ಪ್ರದೇಶದಿಂದ ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ತನಿಖೆಯನ್ನು ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಎರಡು ತಿಂಗಳ ಹಿಂದೆ, ಜಿಂಕೆಯ ಕೊಂಬುಗಳು ಹಾಗೂ ದಂತವನ್ನು ಹೊಂದಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆತ ಹೇಳಿದ ಪ್ರಕಾರ ಅಮೂಲ್ಯವಾದ ವನ್ಯಜೀವಿ ಪದಾರ್ಥಗಳು ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರನ್ನು ತಲುಪಲಿದೆ ಎಂಬ ಖಚಿತ ಮಾಹಿತಿ ದೊರೆತ ಮೇರೆಗೆ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಒಂದು ಕಣ್ಣಿರಿಸಲಾಗಿತ್ತು. ಆ ಪ್ರಕಾರವಾಗಿ ಶನಿವಾರ ಆರೋಪಿಗಳನ್ನು ಮಾಲು ಸಮೇತ ವಶಕ್ಕೆ ತೆಗೆದುಕೊಳ್ಳಲಾಗಿದೆ.
Key words: 400 leopard claws- six tiger claws-sieze- Mysore –four- arrest– Bangalore.