404 ಡಿಪ್ಲೊಮಾ ವಿದ್ಯಾರ್ಥಿಗಳ ಅಕ್ರಮ ಸಾಬೀತು

ಬೆಂಗಳೂರು:ಜುಲೈ-26: ಪರೀಕ್ಷೆಯಲ್ಲಿ ನಕಲು ಮಾಡಿ, ಹೆಚ್ಚಿನ ಅಂಕ ಪಡೆದು, ಭವಿಷ್ಯ ರೂಪಿಸಿಕೊಳ್ಳಲು ಯೋಜನೆ ಸಿದ್ಧಪಡಿಸಿದ್ದ 404 ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಭವಿಷ್ಯಕ್ಕೆ ಕಂಟಕ ತಂದುಕೊಂಡಿರುವುದು ಬಯಲಾಗಿದೆ.

ರಾಜ್ಯದ ವಿವಿಧ ಪಾಲಿಟೆಕ್ನಿಕ್‌ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಇಲಾಖೆ ಏ.29ರಿಂದ ಮೇ 18ರ ವರೆಗೆ ಪರೀಕ್ಷೆ ನಡೆಸಿತ್ತು. ಯಾವುದೇ ರೀತಿಯ ಪರೀಕ್ಷಾ ಅಕ್ರಮ ನಡೆಯದಂತೆ ಎಚ್ಚರ ವಹಿಸಲು ಮತ್ತು ಪರೀಕ್ಷಾ ದುರಾಚಾರಗಳನ್ನು ನಿಯಂತ್ರಿಸಲು ಮುಖ್ಯ ವೀಕ್ಷಕರು, ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿತ್ತು. ಆದರೂ, ರಾಜ್ಯದ 434 ವಿದ್ಯಾರ್ಥಿಗಳು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದು ಬಯಲಾಗಿದೆ.

ಪರೀಕ್ಷೆಯಲ್ಲಿ ನಕಲು, ಸಾಮೂಹಿಕ ನಕಲು ಸೇರಿ ಹಲವು ರೀತಿಯ ಅಕ್ರಮ ನಡೆಸಲು ಚೀಟಿ, ಮೊಬೈಲ್ ಫೋನ್‌, ಎಲೆಕ್ಟ್ರಾನಿಕ್ಸ್‌ ಪರಿಕರ, ಕ್ಯಾಲ್ಕುಲೇಟರ್‌ ಮೊಲಾದ ಪರಿಕರಗಳನ್ನು ಬಳಸಿರುವುದು ತಾಂತ್ರಿಕ ಶಿಕ್ಷಣ ಸಂಸ್ಥೆಯ ತನಿಖೆಯಿಂದ ಬಯಲಾಗಿದೆ.

ವಿದ್ಯಾರ್ಥಿಗಳು ನಡೆಸಿದ ಪರೀಕ್ಷಾ ಅಕ್ರಮದ ಸತ್ಯಾಸತ್ಯತೆ ತಿಳಿಯಲು ಇಲಾಖೆಯ ವಿದ್ಯಾರ್ಥಿ ಮಾಲ್ಪ್ರಾಕ್ಟೀಸ್‌ ವಿಚಾರಣಾ ಸಮಿತಿಯು ಜುಲೈನಲ್ಲಿ ಎಲ್ಲ ವಿದ್ಯಾರ್ಥಿಗಳ ವಿಚಾರಣೆ ನಡೆಸಿದೆ. ವಿಚಾರಣೆ ಸಂದರ್ಭದಲ್ಲಿ 434 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿ ಗಳನ್ನು ದೋಷಮುಕ್ತ ಎಂದು ಘೋಷಿಸಲಾಗಿದೆ. ಉಳಿದ 404 ವಿದ್ಯಾರ್ಥಿಗಳಿಗೆ ಅವರು ಮಾಡಿರುವ ಅಕ್ರಮದ ಆಧಾರದಲ್ಲಿ ಶಿಕ್ಷೆಯನ್ನು ವಿಧಿಸಿದೆ. ಶಿಕ್ಷೆ ಪಡೆದ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಸಂದ ರ್ಭದಲ್ಲಿ ಅಥವಾ ಪರೀಕ್ಷೆಗೆ ದಾಖಲಿಸಿಕೊಳ್ಳುವ ವೇಳೆ ಹೆಚ್ಚಿನ ಎಚ್ಚರಿಕೆಯನ್ನು ಕಾಲೇಜಿನ ಪ್ರಾಂಶು ಪಾಲರು ವಹಿಸಬೇಕು ಎಂದು ನಿರ್ದೇಶನವನ್ನು ಸಮಿತಿ ನೀಡಿದೆ.

ಶಿಕ್ಷೆಯ ವಿಧಾನ: ವಿದ್ಯಾರ್ಥಿಗಳು ಮಾಡಿರುವ ಪರೀಕ್ಷಾ ಅಕ್ರಮದ ಆಧಾರದಲ್ಲಿ ಮೂರು ವಿಧದ ಶಿಕ್ಷೆ ನೀಡಲಾಗಿದೆ. ಕಡಿಮೆ ಅಪರಾಧ ಎಂದು ಸಾಬೀತಾದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ರದ್ದು ಮಾಡಿ ಹೊಸದಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಕಠಿಣ ಶಿಕ್ಷೆಗೆ ಗುರಿಯಾಗಿರುವ ವಿದ್ಯಾರ್ಥಿಗಳಿಗೆ 2023ರವರೆಗೂ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ. 404 ವಿದ್ಯಾರ್ಥಿಗಳಲ್ಲಿ 178 ವಿದ್ಯಾರ್ಥಿಗಳ 2019ರ ಏಪ್ರಿಲ್/ಮೇ ನಲ್ಲಿ ನಡೆದ ಪ್ರಾಯೋಗಿಕ ಹಾಗೂ ಥಿಯರಿ ಪರೀಕ್ಷೆಗಳು ರದ್ದಾಗಿವೆ. ಅಂತಹ ವಿದ್ಯಾರ್ಥಿಗಳು ಸಾಮಾನ್ಯ ವಿದ್ಯಾರ್ಥಿಗಳಂತೆ 2019ರ ಅಕ್ಟೋಬರ್‌/ನವೆಂಬರ್‌ನಲ್ಲಿ ನಡೆಯುವ ಪರೀಕ್ಷೆಗೆ ದಾಖಲಾತಿ ಮಾಡಿಕೊಳ್ಳಬೇಕು ಮತ್ತು ಎಲ್ಲ ಪರೀಕ್ಷೆಯನ್ನು ಹೊಸದಾಗಿಯೇ ಬರೆಯಬೇಕು. 223 ವಿದ್ಯಾರ್ಥಿಗಳ ಥಿಯರಿ ಪರೀಕ್ಷೆಯನ್ನು ಮಾತ್ರ ರದ್ದು ಮಾಡಲಾಗಿದೆ. ಇಂತಹ ವಿದ್ಯಾರ್ಥಿಗಳು ಸೆಮಿಸ್ಟರ್‌ ಪರೀಕ್ಷೆಯನ್ನು 2019ರ ಅಕ್ಟೋಬರ್‌/ನವೆಂಬರ್‌ನಲ್ಲಿ ಬರೆಯಬಹುದಾಗಿದೆ. ಇನ್ನು 3 ವಿದ್ಯಾರ್ಥಿಗಳ 2019ರ ಏಪ್ರಿಲ್ ಮತ್ತು ಮೇನಲ್ಲಿ ಬರೆದಿರುವ ಎಲ್ಲ ಪರೀಕ್ಷೆಯೂ ರದ್ದಾಗಿದೆ ಹಾಗೂ 2022ರ ಅಕ್ಟೋಬರ್‌/ನವೆಂಬರ್‌ ವರೆಗೂ ಡಿಬಾರ್‌ ಮಾಡಲಾಗಿದೆ. ಈ ವಿದ್ಯಾರ್ಥಿಗಳು 2013ರ ಏಪ್ರಿಲ್/ಮೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ತೀರ್ಪಿನಲ್ಲಿ ತಿಳಿಸಿದೆ.

ಆರೋಪಕ್ಕೆ ಅನುಗುಣವಾಗಿ ಶಿಕ್ಷೆ
ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಅಕ್ರಮ ತಡೆಗೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಆದರೂ, ಕೆಲವು ವಿದ್ಯಾರ್ಥಿಗಳು ವಾಮಮಾರ್ಗ ಅನುಸರಿಸುತ್ತಾರೆ. ಇಂತಹ ವಿದ್ಯಾರ್ಥಿಗಳ ವಿಚಾರಣೆ ನಡೆಸಿ, ಅವರ ಆರೋಪಕ್ಕೆ ಅನುಗುಣವಾಗಿ ಶಿಕ್ಷೆ ವಿಧಿಸಿ, ಸಂಬಂಧಪಟ್ಟ ವಿದ್ಯಾರ್ಥಿಗೆ ಹಾಗೂ ಕಾಲೇಜಿಗೆ ಮಾಹಿತಿ ನೀಡಿದ್ದೇವೆ. ವಿದ್ಯಾರ್ಥಿ ಮಾಲ್ಪ್ರಾಕ್ಟೀಸ್‌ ವಿಚಾರಣಾ ಸಮಿತಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕೃಪೆ:ಉದಯವಾಣಿ

404 ಡಿಪ್ಲೊಮಾ ವಿದ್ಯಾರ್ಥಿಗಳ ಅಕ್ರಮ ಸಾಬೀತು
404-proof-of-diploma-student-illegality