ಬೆಂಗಳೂರು, ಅಕ್ಟೋಬರ್ 18, 2021(www.justkannada.in): ಬೆಂಗಳೂರು ಮಹಾನಗರದ ಹೊರವಲಯದಲ್ಲಿ ಹೊಸ ವಸತಿ ಬಡಾವಣೆಯೊಂದನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಡಾ. ಶಿವರಾಂ ಕಾರಂತ ಬಡಾವಣೆಗೆ ಮೂಲಭೂತಸೌಕರ್ಯ ಒದಗಿಸಲು ಬರೋಬ್ಬರಿ ರೂ.೪,೫೦೦ ಕೋಟಿ ಬೇಕಾಗುತ್ತದೆ ಎಂದು ತಿಳಿಸಿದೆ. ಸುಮಾರು ೩,೫೪೬ ಎಕರೆ ವ್ಯಾಪ್ತಿಯ ಈ ಬಡಾವಣೆಯಲ್ಲಿ ವಿವಿಧ ಅಳತೆಯ ೩೦,೦೦೦ ನಿವೇಶನಗಳಿರುತ್ತವೆ.
ಈ ಬಡಾವಣೆಯ ಅಭಿವೃದ್ಧಿ ಸಮಯೋಚಿತವಾಗಿ ಪೂರ್ಣಗೊಳ್ಳುವುದನ್ನು ಖಾತ್ರಿಪಡಿಸಲು ಮಾನ್ಯ ಸರ್ವೋಚ್ಛ ನ್ಯಾಯಾಲಯ ಒಂದು ಸಮಿತಿಯನ್ನು ರಚಿಸಿದ್ದು, ಈ ಸಮಿತಿ ಈ ಯೋಜನೆಯ ನಿಗಾವಣೆಯನ್ನು ಮಾಡುತ್ತಿದೆ. ಈ ವಾರದ ಆರಂಭದಲ್ಲಿ ನಡೆದ ಬಿಡಿಎ ಬೋರ್ಡ್ ಮೀಟಿಂಗ್ ನಲ್ಲಿ ಯೋಜನಾ ವೆಚ್ಚವನ್ನು ಅನುಮೋದಿಸಲಾಗಿದೆ. ಪ್ರಾಧಿಕಾರವು ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ತನ್ನ ಆಂತರಿಕ ಸಂಪನ್ಮೂಲಗಳ ಮೂಲಕ ಆದಾಯವನ್ನು ಕ್ರೋಢೀಕರಿಸುವ ಯೋಜನೆಯನ್ನು ಹೊಂದಿದೆ.
ಮೂಲಭೂತಸೌಕರ್ಯಕ್ಕೆಂದು ಮೀಸಲಿಡುವ ಹಣದಲ್ಲಿ ರಸ್ತೆಗಳ ನಿರ್ಮಾಣ, ಚರಂಡಿಗಳ ನಿರ್ಮಾಣ ಹಾಗೂ ವಿದ್ಯುತ್ ಸಂಪರ್ಕದ ಲೈನ್ಗಳ ಸ್ಥಾಪನೆ ಸೇರಿದೆ. ಬಿಡಿಎ ತನ್ನ ಈ ಯೋಜನಾ ಅಂದಾಜಿನಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳುವ ದರವನ್ನು ಸೇರ್ಪಡೆ ಮಾಡಿಲ್ಲ. ಏಕೆಂದರೆ, ಈ ಬಡಾವಣೆಗೆ ಜಮೀನನ್ನು ನೀಡುವವರಿಗೆ ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು ನೀಡುವ ಮೂಲಕ ಪರಿಹಾರ ನೀಡುವುದು ಅದರ ಉದ್ದೇಶವಾಗಿದೆ.
“ಈ ಗ್ರಾಮಗಳಲ್ಲಿ ಗೈಡೆನ್ಸ್ ವ್ಯಾಲ್ಯೂ ಬಹಳ ಕಡಿಮೆ ಇರುವ ಕಾರಣದಿಂದಾಗಿ ಅಲ್ಲಿನ ನಿವಾಸಿಗಳು ನಗದು ಪರಿಹಾರವನ್ನು ಒಪ್ಪದೇ ಇರಬಹುದು. ಈ ಬಡಾವಣೆ ನಿರ್ಮಾಣಕ್ಕಾಗಿ ಜಮೀನನ್ನು ಒದಗಿಸುವ ಪ್ರತಿಯೊಬ್ಬರಿಗೂ ಒಂದು ಎಕರೆಗೆ ೩೦x೪೦ ಅಳತೆಯ ಎಂಟು ನಿವೇಶನಗಳನ್ನು ನೀಡಲಾಗುತ್ತದೆ. ಇದು ಭೂಮಿ ಮಾಲೀಕರ ಜೊತೆಗೆ ನಮಗೂ ಸಹಾಯವಾಗುತ್ತದೆ,” ಎನ್ನುವುದು ಬಿಡಿಎ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.
ಅಭಿವೃದ್ಧಿಪಡಿಸುವ ನಿವೇಶನಗಳ ಬೆಲೆ, ಯಾವುದೇ ಮೂಲಭೂತಸೌಕರ್ಯಗಳು ಇಲ್ಲದಿರುವಂತಹ ಮೂಲ ಭೂಮಿಯ ಬೆಲೆಗಿಂತ ಹಲವು ಪಟ್ಟು ಹೆಚ್ಚಾಗಿರುವ ಕಾರಣದಿಂದಾಗಿ ಭೂಮಾಲೀಕರಿಗೆ ಇದು ಲಾಭದಾಯಕವಾಗುತ್ತದೆ.
ಭೂಮಿಯನ್ನು ಕಳೆದುಕೊಳ್ಳುವ ಭೂಮಾಲೀಕರಿಗೆ ಆದ್ಯತೆಯ ಮೇರೆಗೆ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ನೀಡಬೇಕೆಂದು ಮಾನ್ಯ ಸರ್ವೋಚ್ಛ ನ್ಯಾಯಾಲಯ ಆದೇಶಿಸಿದೆ. ಹಾಗಾಗಿ ಬಿಡಿಎ ಪ್ರಾರಂಭಿಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸ್ವತಃ ಹಣ ಕ್ರೋಢೀಕರಿಸಬೇಕಾಗುತ್ತದೆ.
“ನಾವು ಬೃಹತ್ ಸಂಖ್ಯೆಯ ನಿವೇಶನಗಳು ಹಾಗೂ ಮೂಲೆ ನಿವೇಶನಗಳನ್ನು ಹರಾಜು ಹಾಕುತ್ತಿದ್ದೇವೆ. ಈ ಮೂಲಕ ಬರುವಂತಹ ಆದಾಯವನ್ನು ಕಾರಂತ ಬಡಾವಣೆ ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಾಗುತ್ತದೆ,” ಎಂದು ಬಿಡಿಎ ಅಭಿಯಂತರರು ತಿಳಿಸಿದ್ದಾರೆ.
೨೦೦೭ರಲ್ಲಿ ಮೊದಲ ಬಾರಿಗೆ ಘೋಷಣೆಯಾದ ಈ ಬಡಾವಣೆಯ ಅಭಿವೃದ್ಧಿಯನ್ನು ಬಿಡಿಎ ಇದೇ ಮೊದಲ ಬಾರಿಗೆ ಗಂಭೀರವಾಗಿ ಪರಿಗಣಿಸಿದೆ. ಈ ಬಡಾವಣೆ ಹೆಸರಘಟ್ಟ ಹಾಗೂ ದೊಡ್ಡಬಳ್ಳಾಪುರಗಳ ನಡುವೆ ಬರುವ ಸುಮಾರು ೧೭ ಗ್ರಾಮಗಳನ್ನು ವ್ಯಾಪಿಸುತ್ತದೆ. ಮೂಲದಲ್ಲಿ ಗುರುತಿಸಲಾದಂತಹ ಒಟ್ಟು ೩,೫೪೬ ಎಕರೆ ಭೂಮಿಯ ಪೈಕಿ ೧,೦೨೭ ಎಕರೆ ಭೂಮಿಯಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ. ಇನ್ನುಳಿದ ಭೂಮಿ ಬಡಾವಣೆಗಳ ನಿರ್ಮಾಣಕ್ಕೆ ಲಭ್ಯವಿದೆ.
ಈ ನಡುವೆ, ಬಿಡಿಎ ನಿವೇಶನಗಳ ಮಾರಾಟದಿಂದ ಗಳಿಸುವ ಆದಾಯದಿಂದ ಈ ಬಡಾವಣೆಯ ಅಭಿವೃದ್ಧಿಗೆಂದೇ ಪ್ರತ್ಯೇಕ ಎಸ್ಕೊç ಖಾತೆಯನ್ನು ತೆರೆಯುವಂತೆ ನಾಗರೀಕರು ಕೋರಿದ್ದಾರೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಫಲಾನುಭವಿಗಳು ಕಳೆದ ಐದು ವರ್ಷಗಳಿಂದ ನಿವೇಶನ ಹಂಚಿಕೆಗಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಭವಿಸಿರುವ ಸಮಸ್ಯೆಗಳಿಂದಾಗಿ ಬಿಡಿಎ ತೀವ್ರ ನಿಗಾವಣೆಯಡಿ ಇದೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: 4,500 crore- BDA -project – Bangalore.