ನವದೆಹಲಿ, ಜುಲೈ 29, 2021 (www.justkannada.in): ಸುಮಾರು ರೂ.೪೯,೦೦೦ ಕೋಟಿ ಕ್ಲೇಮ್ ಆಗದಿರುವಂತಹ ಹಣ ಬ್ಯಾಂಕುಗಳು ಹಾಗೂ ಇನ್ಶೂರೆನ್ಸ್ ಕಂಪನಿಗಳ ಬಳಿ ಹಾಗೇ ಉಳಿದುಕೊಂಡಿದೆ ಎಂಬ ವಿಷಯವನ್ನು ಸ್ವತಃ ಹಣಕಾಸು ಇಲಾಖೆಯ ರಾಜ್ಯ ಸಚಿವರಾದ ಭಗವತ್ ಕರಾಡ್ ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಈ ಕ್ಲೇಮ್ ಮಾಡದಿರುವಂತಹ ಮೊತ್ತದ ವಿವರ ಡಿಸೆಂಬರ್ 31, 2020ರವರೆಗೆ ಅಷ್ಟೆ.
ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ವಿವರಗಳನ್ನು ನೀಡಿದ ಸಚಿವರು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿಂದ ಬಂದಿರುವ ಮಾಹಿತಿಯ ಪ್ರಕಾರ ಬ್ಯಾಂಕುಗಳಲ್ಲಿ ಕ್ಲೇಮ್ ಮಾಡದೆ ಉಳಿದಿರುವ ಠೇವಣಿಗಳ ಒಟ್ಟು ಮೊತ್ತ, ಡಿಸೆಂಬರ್ ೩೧, ೨೦೨೦ ರಂತೆ ರೂ.೨೪,೩೫೬ ಕೋಟಿಗಳಂತೆ.
ಇನ್ಶೂರೆನ್ಸ್ ರೆಗ್ಯೂಲೇಟರಿ ಡೆವೆಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರಡಿಎಐ) ಪ್ರಕಾರ ಸಾರ್ವಜನಿಕ ಹಾಗೂ ಖಾಸಗಿ ವಿಮಾ ಕಂಪನಿಗಳಲ್ಲಿ ಪಾಲಿಸಿದಾರರು ಕ್ಲೇಮ್ ಮಾಡದೇ ಉಳಿದುಕೊಂಡಿರುವ ಮೊತ್ತ ರೂ.೨೪,೫೮೬ ಕೋಟಿಗಳಂತೆ (ಇದೂ ಸಹ ಡಿಸೆಂಬರ್ ೨೦೨೦ರ ಅಂತ್ಯಕ್ಕೆ). ಆರ್ಬಿಐ, ಡೆಪಾಸಿಟರ್ ಎಜುಕೇಷನ್ ಅಂಡ್ ಅವೇರ್ನೆಸ್ ಫಂಡ್ (DEAF) ಯೋಜನೆಯನ್ನು, ೨೦೧೪ನ್ನು ರೂಪಿಸಿದೆ.
ಈ ಯೋಜನೆಯ ಪ್ರಕಾರ, ಬ್ಯಾಂಕುಗಳಲ್ಲಿ ಕ್ಲೇಮ್ ಆಗದೆ ಉಳಿದಿರುವ ಹಣವನ್ನು ಬ್ಯಾಂಕುಗಳಿಂದ ಈ DEAF ಗೆ ವರ್ಗಾಯಿಸಲಾಗುತ್ತದೆ, ಈ ಮೊತ್ತವನ್ನು ಠೇವಣಿದಾರರಿಗೆ ನೀಡುವ ಬಡ್ಡಿಗೆ ಬಳಸಲಾಗುತ್ತದೆ.
ಮತ್ತೊಂದೆಡೆ, ೧೦ ವರ್ಷಗಳಿಗಿಂತ ಹೆಚ್ಚಿನ ಸಮಯದವರೆಗೆ ಪಾಲಿಸಿದಾರರು ಕ್ಲೇಮ್ ಮಾಡದೆ ಇರುವಂತಹ ಮೊತ್ತವನ್ನು ಇನ್ಶೂರೆನ್ಸ್ ಕಂಪನಿಗಳು ಪ್ರತಿ ವರ್ಷ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ (SCWF) ವರ್ಗಾಯಸುತ್ತವೆ. SCWF ಅನ್ನು ಹಿರಿಯ ನಾಗರಿಕರ ಕಲ್ಯಾಣ ಯೋಜನೆಗಳ ಉತ್ತೇಜನಕ್ಕಾಗಿ ಬಳಸಿಕೊಳ್ಳಲಾಗುತ್ತದಂತೆ.
ಬ್ಯಾಂಕುಗಳಲ್ಲಿ ಠೇವಣಿ ಹಣವನ್ನು ಕ್ಲೇಮ್ ಮಾಡದೇ ಇರುವಂತಹವರು ಹಾಗೂ ಕಾರ್ಯನಿರ್ವಹಣೆ ಇಲ್ಲದಿರುವಂತಹ ಖಾತೆಗಳ ಖಾತೆದಾರರನ್ನು ಪತ್ತೆ ಹಚ್ಚುವಲ್ಲಿ ಬ್ಯಾಂಕುಗಳ ಮತ್ತಷ್ಟು ಉತ್ತಮ ಪ್ರಯತ್ನ ನಡೆಸಬೇಕು ಎಂದು ಆರ್ಬಿಐ ಬ್ಯಾಂಕುಗಳಿಗೆ ಸಲಹೆ ನೀಡಿದೆಯಂತೆ.
Key words: 49,000 crores -remaining -uninsured – insurance -companies.