ಮೈಸೂರು, ಜುಲೈ,20,2022(www.justkannada.in): ಮೈಸೂರು ಜಯದೇವದಲ್ಲಿ ಹೃದಯರೋಗಿಗಳ ಸಂಖ್ಯೆ ಹೆಚ್ಚಾಗಿ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಒಂದೂವರೆ ತಿಂಗಳಲ್ಲಿ 4ನೇ ಕ್ಯಾಥ್ ಲ್ಯಾಬ್ ಅನ್ನು ಪ್ರಾರಂಭ ಮಾಡಲಾಗುವುದು ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಸರ್ಕಾರ ಒಂದು ವರ್ಷ ಮುಂದುವರೆಸಿದ ಹಿನ್ನೆಲೆಯಲ್ಲಿ ಮೈಸೂರು ಜಯದೇವ ಹೃದ್ರೋಗ ಆಸತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದರವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮೈಸೂರು ಜಯದೇವದಲ್ಲಿ ಈಗಾಗಲೇ ಪ್ರತಿದಿನ 700 ರಿಂದ 800 ಹೊರ ರೋಗಿಗಳು ಬರುತ್ತಿದ್ದಾರೆ. ಪ್ರತಿದಿನ 35 ರಿಂದ 40 ಕ್ಯಾಥ್ ಲ್ಯಾಬ್ ಪ್ರೊಸಿಜರ್ ಗಳು ನಡೆಯುತ್ತಿವೆ. ಇದರಿಂದ ಜನಸಾಮಾನ್ಯರು ಕಾಯುವುದನ್ನು ಕಡಿಮೆ ಮಾಡಲು ತಜ್ಞವೈದ್ಯರ ಮೇಲೆ ಒತ್ತಡ ಕಡಿಮೆ ಮಾಡಲು ಹೊಸ ಕ್ಯಾಥ್ ಲ್ಯಾಬ್ ಪ್ರಾರಂಭಿಸಲಿದ್ದೇವೆ. ಆಗಸ್ಟ್ 4ನೇ ವಾರದಲ್ಲಿ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಸ್ಯಾಟಲೈಟ್ ಸೆಂಟರ್ ತೆರೆಯಲಾಗುತ್ತದೆ. ಇದರಲ್ಲಿ ಕ್ಯಾಥ್ ಲ್ಯಾಬ್ ಒ.ಪಿ.ಡಿ. ಐ.ಸಿ.ಯು, ಇರುತ್ತದೆ. ಇದರಿಂದ ಅಭಾಗದ ಜನರಿಗೆ ಅನುಕೂಲವಾಗುತ್ತದೆ. ಕಲ್ಬುರ್ಗಿಯಲ್ಲಿ ಈಗಾಗಲೇ 150 ಹಾಸಿಗೆ ಸಾಮರ್ಥ್ಯ ಜಯದೇವ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ವರ್ಷದಲ್ಲಿ ಕಾರ್ಯನಿರ್ವಹಣೆ ಮಾಡುತ್ತದೆ. ಹಾಗೆಯೇ ಬೆಳಗಾವಿ ರೆವಿನ್ಯೂ ವಿಭಾಗದ ಹುಬ್ಬಳಿಯಲ್ಲಿ 400 ಹಾಸಿಗೆ ಸಾಮರ್ಥ್ಯದ ಜಯದೇವ ಆಸ್ಪತ್ರೆಯನ್ನು ಪ್ರಾರಂಭ ಮಾಡಬೇಕಾಗಿದೆ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಆಡಳಿತಾತ್ಮಕ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಆಗಸ್ಟ್ ಕೊನೆವಾರದಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಶಂಕುಸ್ಥಾಪನೆ ನೆರವೇರಿಸುವರು ಎಂದ ಅವರು ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ಹೃದಯರೋಗಿಗಳಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿರುವುದು ಸಂತೋಷದ ವಿಷಯ ಎಂದರು.
ಸಿಎಂ ಬಸವರಾಜ ಬೊಮ್ಮಾಯಿಯವರು ನಮ್ಮ ಕಾರ್ಯವೈಖರಿ, ಸಾಧನೆಯನ್ನು ಗುರುತಿಸಿ ಸೇವಾವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರಿಗೆ ಧನ್ಯವಾದ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡ. ಅನುಸೂಯ ಮಂಜುನಾಥ್, ಮೈಸೂರು ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್, ನರ್ಸಿಂಗ್ ಅಧೀಕ್ಷಕ ಹರೀಶ್ ಕುಮಾರ್ ಹಾಜರಿದ್ದರು.
Key words: 4th– cath lab -opened – Jayadeva-Mysore-Dr. CN Manjunath.