ಮೈಸೂರು,ಜುಲೈ,22,2022(www.justkannada.in): ಇಂದು ಆಷಾಢ ಮಾಸದ ನಾಲ್ಕನೇ ಶುಕ್ರವಾರ ಹಿನ್ನೆಲೆ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತರಾದ ಬಳಿಕ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನಾಡ ಅದಿ ದೇವತೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ತಾಯಿ ಚಾಮುಂಡೇಶ್ವರಿ ದರ್ಶನದ ಬಳಿಕ ದೇವಸ್ಥಾನ ಮುಂಭಾಗ ಪ್ರಸಾದ ವಿತರಿಸಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಬಿ ರಿಪೋರ್ಟ್ ವಿಚಾರ ಕುರಿತು ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ನನಗೆ ಮೊದಲ ದಿನವೇ ಈ ಪ್ರಕರಣದಿಂದ ಆರೋಪ ಮುಕ್ತನಾಗಿ ಬರುತ್ತೇನೆಂದು ಗೊತ್ತಿತ್ತು. ನಾನು ಈ ಪ್ರಕರಣದಲ್ಲಿ ಯಾವ ತಪ್ಪು ಮಾಡಿಲ್ಲ. ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ಕೊಟ್ಟಿದ್ದೆ. ತನಿಖೆ ಮೂಲಕ ಈಗ ಸಂಪೂರ್ಣ ಆರೋಪ ಮುಕ್ತನಾಗಿದ್ದೇನೆ. ಪ್ರಕರಣದಿಂದ ಪಕ್ಷಕ್ಕೆ ಇದ್ದ ಮುಜುಗರ ಈಗ ನಿವಾರಣೆಯಾಗಿದೆ ಎಂದರು.
ಬಿ ರಿಪೋರ್ಟ್ ಆದರೂ ಸಹ ಕಾಂಗ್ರೆಸ್ ಈ ಪ್ರಕರಣದ ಬಗ್ಗೆ ಟೀಕೆ ಮಾಡುತ್ತಿರುವುದು ಬೇಸರ ತರಿಸಿದೆ. ಸಿಎಂ ಆಗಿದ್ದ ಸಿದ್ದರಾಮಯ್ಯನವರಿಗೆ ಪ್ರಕರಣದ ತನಿಖೆಗಳು ಹೇಗೆ ನಡೆಯುತ್ತದೆ ಎಂದು ಗೊತ್ತಿದ್ದರೂ ಬಿ ರಿಪೋರ್ಟ್ ಬಗ್ಗೆ ಅನುಮಾನ ವ್ಯಕ್ತ ಪಡಿಸಿರುವುದು ಬೇಸರ ಮೂಡಿಸಿದೆ. ಸಿದ್ದರಾಮಯ್ಯ ಕಾನೂನು ಪಂಡಿತರ ಆಗಿದ್ದಾರೆ. ಸುಮ್ಮನೆ ಪ್ರಕರಣದ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದರು.
ನಾನು ಸಚಿವ ಸಂಪುಟ ಮತ್ತೆ ಸೇರುವುದು ಪಕ್ಷದ ನಾಯಕರುಗಳಿಗೆ ಬಿಟ್ಟ ವಿಚಾರ. ನನ್ನದು ಯಾವ ತಪ್ಪು ಇರದಿದ್ದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಈಗ ಆರೋಪ ಮುಕ್ತ ನಾಗಿದ್ದೇನೆ. ಸಂಪುಟ ಭಾಗವಾಗುವ ಎಲ್ಲಾ ನಿರ್ಧಾರಗಳು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.
Key words: 4th Friday –Asadha-KS Eshwarappa –visit-Chamundi hill