ಕೊಪ್ಪಳ,ಜೂನ್,26,2023(www.justkannada.in): ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ರಾಜ್ಯದಲ್ಲಿ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದ್ದು, ಸಾವಿರಾರು ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದರಿಂದ ಬಸ್ಗಳು ತುಂಬಿತುಳುಕುತ್ತಿವೆ. ಇನ್ನು ಕೆಲವೆಡೆ ಪ್ರಯಾಣಿಕರು ಹಾಗೂ ಬಸ್ ಚಾಲಕ-ನಿರ್ವಹಕರ ನಡುವೆ ಗಲಾಟೆಗಳು ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಈ ಮಧ್ಯೆ ಚಾಲಕ ಬಸ್ ನಿಲ್ಲಿಸದಿದ್ದಕ್ಕೆ ಬಸ್ ಗೆ ಮಹಿಳೆ ಕಲ್ಲೆಸೆದು 5 ಸಾವಿರ ರೂ. ದಂಡ ತೆತ್ತಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ಈ ಘಟನೆ ನಡೆದಿದೆ. ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್ ಗೆ ಇಲಕಲ್ ಬಳಿಯ ಪಾಪನಳ್ಳಿ ನಿವಾಸಿಯಾಗಿರುವ ಲಕ್ಷ್ಮಿ ಎನ್ನುವ ಮಹಿಳೆ ಕಲ್ಲೆಸೆದಿದ್ದಾರೆ. KA-35, F-252 ಸಂಖ್ಯೆಯ ಬಸ್ ನ ಗ್ಲಾಸ್ಗೆ ಡ್ಯಾಮೇಜ್ ಆಗಿದೆ.
ಮಹಿಳೆ ಕಲ್ಲೆಸೆದ ಹಿನ್ನೆಲೆ ಚಾಲಕ ಬಸ್ ಅನ್ನು ಪ್ಯಾಸೆಂಜರ್ ಸಮೇತ ಮುನಿರಾಬಾದ್ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ. ಅಲ್ಲದೇ ಡ್ರೈವರ್ ಮುತ್ತಪ್ಪ ಮಹಿಳೆ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದು, ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಸಂಧಾನ ಮಾಡಿದ್ದಾರೆ.
ಬಸ್ ಡ್ಯಾಮೇಜ್ ಹಿನ್ನೆಲೆಯಲ್ಲಿ 5000 ರೂ, ದಂಡ ಕಟ್ಟುವಂತೆ ಡಿಪೋ ಮ್ಯಾನೇಜರ್ ಹೇಳಿದ್ದು, ಇಲ್ಲವಾದಲ್ಲಿ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೊನೆಗೆ ಮಹಿಳೆ ಲಕ್ಷ್ಮಿ ಕ್ಷಮೆ ಕೇಳಿ ಪೊಲೀಸರ ಸಮ್ಮುಖದಲ್ಲಿ 5000 ರೂ. ದಂಡ ಕಟ್ಟಿ ಅದೇ ಬಸ್ ನಿಂದ ಅಲ್ಲಿಂದ ತೆರಳಿದ್ದಾರೆ.
ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಲಕ್ಷ್ಮಿ ಬಂದಿದ್ದರು. ಲಕ್ಷ್ಮಿ ಜೊತೆ ಇನ್ನೋರ್ವ ಮಹಿಳೆ ಇಬ್ಬರು ಹೆಣ್ಮಕ್ಕಳು ಇದ್ದರು. ಹುಲಿಗಿ ದರ್ಶನ ಪಡೆದು ಲಿಂಗಾಪುರ ಬಳಿ ಬಸ್ ಗಾಗಿ ಕಾದು ಕುಳಿತಿದ್ದ ಲಕ್ಷ್ಮಿ, ತನ್ನ ಊರಿಗೆ ತೆರಳಲು ಯಾವೊಂದು ಬಸ್ ನಿಲ್ಲಿಸದ ಕಾರಣ ಕೋಪ ಬಂದು ಬಸ್ ಗೆ ಕಲ್ಲೆಸೆದಿದ್ದಾರೆ.
ಮಳೆಯಲ್ಲಿ ನಾಲ್ಕೈದು ತಾಸು ಬಸ್ ಗಾಗಿ ಲಕ್ಷ್ಮಿ ಕಾದು ಕುಳಿತಿದ್ದರು. ಬಸ್ ನಿಲ್ಲಿಸದ ಹಿನ್ನೆಲೆ ಕೋಪ ಬಂದು ಬಸ್ ಗೆ ಕಲ್ಲೆಸೆದಿದ್ದಾರೆ ಎನ್ನಲಾಗಿದೆ.
Key words: 5 thousand –fine-throwing -stones – bus-woman