ಬೆಂಗಳೂರು,ಅಕ್ಟೋಬರ್,21,2024 (www.justkannada.in): 545 ಪಿಎಸ್ ಐ ನೇಮಕಾತಿ ಮರುಪರೀಕ್ಷೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನ ಪ್ರಕಟಿಸಲಾಗಿದೆ.
ರಾಜ್ಯದಲ್ಲಿ 545 ಪಿಎಸ್ ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಭಾರಿ ಸದ್ದು ಮಾಡಿತ್ತು. ಇದಾದ ಬಳಿಕ ಹೈಕೋರ್ಟ್ ಸೂಚನೆ ಮೇರೆಗೆ ಸರ್ಕಾರವು ಮತ್ತೆ 545 ಪಿಎಸ್ ಐ ಹುದ್ದೆಗೆ ಮರು ಪರೀಕ್ಷೆ ನಡೆಸಿತ್ತು..
ಇದೀಗ ರಾಜ್ಯ ಸರ್ಕಾರ ಪಿಎಸ್‌ಐ ನೇರ ನೇಮಕಾತಿಗಳ 01.01.2023ರ ಸುತ್ತೋಲೆಯ ಅನ್ವಯ ಆಯ್ಕೆ ಪಟ್ಟಿ ತಯಾರಿಸಿ ಪ್ರಕಟಿಸಿದೆ. ಇಂದು ಈ ಕುರಿತು ರಾಜ್ಯ ಗೃಹ ಇಲಾಖೆಯಿಂದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ಸಂಬಂಧ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ದಿನಾಂಕ 18-10-2024ರಲ್ಲಿ 545 ಪಿಎಸ್‌ಐ ಹುದ್ದೆಗಳ ನೇರ ನೇಮಕಾತಿ ಕುರಿತಂತೆ ಆಯ್ಕೆ ಪಟ್ಟಿಯನ್ನು ದಿನಾಂಕ 01-02-2023ರ ಸುತ್ತೋಲೆಯ ಅನ್ವಯ ತಯಾರಿಸಿ ಪ್ರಕಟಿಸಲಾಗಿದೆ. ದಿನಾಂಕ 06-06-2020ರ ಸುತ್ತೋಲೆಯ ಅನ್ವಯ ಆಯ್ಕೆ ಪಟ್ಟಿಯಿಂದ ಹೊರಗುಳಿಯುವ 40 ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಅನುಗುಣವಾಗಿ 40 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ ಕಾಯ್ದಿರಿಸಿ, ಈ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವುದಾಗಿ ತಿಳಿಸಿದೆ.
ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವ ಸಂದರ್ಭದಲ್ಲಿ ಈ ಆಯ್ಕೆ ಪಟ್ಟಿಯು ಮಾನ್ಯ ಉಚ್ಛ ನ್ಯಾಯಾಲಯದ ರಿಟ್ ಪಿಟಿಷನ್ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರಲಿದೆ. ಈ ಆಯ್ಕೆ ಪಟ್ಟಿಯಲ್ಲಿ ವೃಂದ ಬದಲಾವಣೆ, ಮೀಸಲಾತಿ ಪ್ರವರ್ಗ ಬದಲಾವಣೆ, ಅರ್ಹತಾ ಪಟ್ಟಿಯಲ್ಲಿನ ಸ್ಥಾನ ಮತ್ತು ಘಟಕಗಳ ಬದಲಾವಣೆ ಆಗುವ ಸಾಧ್ಯತೆಗಳಿಗೆ ಒಳಪಟ್ಟಿರುತ್ತದೆ ಎಂಬ ಷರತ್ತು ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
Key words: 545 PSI Recruitment, Provisional Selection List, Published