ಬೆಂಗಳೂರು,ಮೇ,27,2021(www.justkannada.in): ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ 6 ತಿಂಗಳಾಗಿದ್ದು, ಹೀಗಾಗಿ ಜನವಿರೋಧಿ, ರೈತವಿರೋಧಿ ತಿದ್ದುಪಡಿ ಕಾಯ್ದೆಗಳನ್ನ ವಾಪಸ್ ಪಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿದ್ಧರಾಮಯ್ಯ, ಕೃಷಿ ತಿದ್ದುಪಡಿ ಕಾಯ್ದೆ ರೈತರಿಗೆ ಮರಣಶಾಸನವಾಗಲಿದೆ. ಹೀಗಾಗಿ ರೈತರ ಬೇಡಿಕೆಗಳನ್ನು ಪ್ರಜಾತಾಂತ್ರಿಕವಾಗಿ ಬಗೆಹರಿಸಿ, ಜನವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು. ರೈತರ ಪ್ರತಿಭಟನೆಯ ಸ್ಥಳದಲ್ಲಿ ಸುಮಾರು 340 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಈ ಸಾವುಗಳಿಗೆ ಕೇಂದ್ರ ಸರ್ಕಾರವೇ ನೇರಹೊಣೆ. ಜಗತ್ತಿನ ಯಾವುದೇ ದೇಶದ ನಾಗರಿಕ ಸರ್ಕಾರವು ಜನರ ಬೃಹತ್ ಚಳುವಳಿಯನ್ನು ಈ ಮಟ್ಟದಲ್ಲಿ ನಿರ್ಲಕ್ಷಿಸಿದ ಇತಿಹಾಸವಿಲ್ಲ ಎಂದು ಕಿಡಿಕಾರಿದರು.
ದೇಶದ ಶೇ. 80 ರಷ್ಟು ಜನರು ರೈತಾಪಿ ಕುಟುಂಬಗಳೊಂದಿಗೆ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಸಂಬಂಧವಿರುವವರು. ಇಷ್ಟು ಬೃಹತ್ ಜನ ಸಮುದಾಯದ ಹಕ್ಕೊತ್ತಾಯಗಳಿಗೆ ಸರ್ಕಾರ ಕುರುಡಾಗಿ, ಕಿವುಡಾಗಿ ನಡೆದುಕೊಳ್ಳುತ್ತಿರುವುದು ದುರಂತ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಮಾರುಕಟ್ಟೆಯಲ್ಲಿ ಬೇಳೆ ಕಾಳುಗಳ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 75 ರಷ್ಟು ಹೆಚ್ಚಾಗಿದೆ. ಅಡುಗೆ ಎಣ್ಣೆಯ ಬೆಲೆ ಶೇ. 120 ಹೆಚ್ಚಾಗಿದೆ. ಇವುಗಳಿಗೆ ಸಂಬಂಧಿಸಿದಂತೆ ಹಣದುಬ್ಬರದ ಪ್ರಮಾಣ ಶೇ.16 ಹೆಚ್ಚಾಗಿದೆ. ಹಾಗಿದ್ದರೆ ರೈತರು ಬೆಳೆದದ್ದೆಲ್ಲ ಎಲ್ಲಿ ಹೋಯಿತು? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
Key words: 6 months-farmer-protest -former CM-Siddaramaiah -urges -Center