ಮೈಸೂರು,ಜು,24,2020(www.justkannada.in): 71ನೇ ಗಣರಾಜ್ಯೋತ್ಸವ ಅಂಗವಾಗಿ ಮೈಸೂರಿನ ಮಹಾಜನ ಕಾಲೇಜಿನ ಎಪಿಜೆ ಅಬ್ದುಲ್ ಕಾಲಂ ಸಭಾಂಗಣದಲ್ಲಿ ಅಪರೂಪದ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಆಯೋಜಿಸಲಾಗಿದೆ.
ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿರುವ ಐತಿಹಾಸಿಕ ನೋಟು, ನಾಣ್ಯಗಳ ಪ್ರದರ್ಶನ ಕಾರ್ಯಕ್ರಮವನ್ನ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಉದ್ಘಾಟಿಸಿದರು. 57 ದೇಶಗಳ ನಾಣ್ಯ ಐತಿಹಾಸಿಕ ನೋಟು, ನಾಣ್ಯಗಳನ್ನ ಪ್ರದರ್ಶನಕ್ಕಿಡಲಾಗಿದೆ.
200-300 ವರ್ಷಗಳ ಇತಿಹಾಸವುಳ್ಳ ವಿವಿಧ ಆಕಾರದ, ತೂಕದ ನಾಣ್ಯಗಳ ಸಂಗ್ರಹ. ಸ್ವತಂತ್ರಪೂರ್ವ ಭಾರತದ ಈಸ್ಟ್ ಇಂಡಿಯಾ ಕಂಪನಿ ಬಳಸುತ್ತಿದ್ದ ರಾಣಿ ವಿಕ್ಟೋರಿಯಾ, 7ನೇ ಎಡ್ವರ್ಡ್, ಕಿಂಗ್ ಜಾರ್ಜ್ ಮುಂತಾದವರ ಚಿತ್ರವುಳ್ಳ ಬೆಳ್ಳಿ, ತಾಮ್ರದ ನಾಣ್ಯಗಳು, ಸ್ವಾತಂತ್ರ್ಯ ಪೂರ್ವದ ಬ್ರಿಟೀಷ್, ಪೋರ್ಚ್ಗೀಸರ ಮತ್ತು ಸ್ವಾತಂತ್ರ್ಯ ಭಾರತದ ನಾಣ್ಯ, ನೋಟುಗಳು ಎಲ್ಲರ ಗಮನ ಸೆಳೆಯುತ್ತಿವೆ.
ಇನ್ನು ರೋಮನ್, ಗುಪ್ತರ ನಾಣ್ಯಗಳು, ಶಾತವಾಹನರು, ಕದಂಬ, ಚೋಳ, ಪಾಂಡ್ಯ ಮುಂತಾದ ಪ್ರಾಚೀನ ಭಾರತದ ನಾಣ್ಯಗಳು, ಮೊಘಲ್ ಸಾಮ್ರಾಜ್ಯದ ಅಕ್ಬರ್, ಜಹಂಗೀರ್, ಷಹಜಹಾನ್, ಔರಂಗಜೇಬ್ ರ ನಾಣ್ಯ, ವಿಜಯನಗರದ ಕೃಷ್ಣದೇವರಾಯ, ಅಚ್ಚುತರಾಯ, ಪ್ರತಾಪ ದೇವರಾಯರ ನಾಣ್ಯ, ಮೈಸೂರು, ಬಿಜಾಪುರ ತಿರುವಾಂಕೂರು, ಹೈದರಾಬಾದ್, ಕಛ್, ಬರೋಡ, ಗ್ವಾಲಿಯರ್, ಮೇವಾರ ಮುಂತಾದ ಭಾರತೀಯ ರಾಜ್ಯ ಸಂಸ್ಥಾನಗಳ ಅಪರೂಪದ ನಾಣ್ಯಗಳು ಇತಿಹಾಸದತ್ತ ಕಣ್ಣು ಹಾಯಿಸುವಂತೆ ಮಾಡುತ್ತಿವೆ.
ಹಾಗೆಯೇ ಕೆಲ ವರ್ಷದ ಹಿಂದೆ ಚಲಾವಣೆಯಿಂದ ಹಿಂತೆಗೆದುಕೊಂಡ ಸಾವಿರ ರೂಪಾಯಿ ನೋಟು, ವಿವಿಧ ರಾಷ್ಟ್ರಗಳ ನಾಣ್ಯಗಳು, ತಾಮ್ರ, ಚಿನ್ನ, ಬೆಳ್ಳಿ, ಸೀಸ ಹಾಗೂ ಹಿತ್ತಾಳೆ ಮುಂತಾದ ಲೋಹಗಳಿಂದ ತಯಾರಿಸಿದ ನಾಣ್ಯಗಳು ಸಹ ಎಲ್ಲರನ್ನ ಆಕರ್ಷಿಸುತ್ತಿವೆ.
Key words: 71st Republic Day- Exhibition – historical- note – coins – Mahajan College -Mysore.