ಬೆಂಗಳೂರು, ಡಿಸೆಂಬರ್ 17, 2022(www.justkannada.in): ಸ್ವಿಗ್ಗಿಯಲ್ಲಿ ಈ ವರ್ಷದ ಅತೀ ಹೆಚ್ಚಿನ ಮೊತ್ತದ ಆರ್ಡರ್ ಈ ವರ್ಷ ಬೆಂಗಳೂರಿನಲ್ಲಿ ಮಾಡಲಾಗಿದೆ. ಆನ್ ಲೈನ್ ಆಹಾರ ಆರ್ಡರ್ ಹಾಗೂ ಡೆಲಿವರಿ ಮಾಡುವ ವೇದಿಕೆ ಸ್ವಿಗ್ಗಿ ತನ್ನ ಇತ್ತೀಚಿನ ಟ್ರೆಂಡ್ ವರದಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ದೀಪಾವಳಿ ಸಮಯದಲ್ಲಿ ಬೆಂಗಳೂರು ನಗರದ ಗ್ರಾಹಕರೊಬ್ಬರು ಬರೋಬ್ಬರಿ ರೂ.೭೫,೩೭೮ ಮೊತ್ತದ ಆರ್ಡರ್ ನೀಡಿರುವುದಾಗಿ ಹೇಳಿಕೊಂಡಿದೆ. ಪುಣೆಯ ಮತ್ತೋರ್ವ ಗ್ರಾಹಕರು ಬರ್ಗರ್ ಗಳು ಹಾಗೂ ಫ್ರೈಗಳನ್ನು ಸ್ವಿಗ್ಗಿ ಮೂಲಕ ಖರೀದಿಸಲು ರೂ.೭೧,೨೨೯ ಖರ್ಚು ಮಾಡಿದ್ದಾರಂತೆ.
“ನಮ್ಮ ಅತೀ ಹಸಿವಿನ ಗ್ರಾಹಕ ಬೆಂಗಳೂರಿನವರಾಗಿದ್ದು, ದೀಪಾವಳಿಯಂದು ಬರೋಬ್ಬರಿ ರೂ.೭೫,೩೭೮ ಮೊತ್ತದ ಸಿಂಗಲ್ ಆರ್ಡರ್ ಬಂದಿತ್ತು. ಪುಣೆಯ ಗ್ರಾಹಕರೊಬ್ಬರು ಇದೇ ರೀತಿ ರೂ.೭೧,೨೨೯ ಮೊತ್ತದ ಆರ್ಡರ್ ಅನ್ನು ಮಾಡಿದ್ದಾರೆ,” ಎಂದು ಸ್ವಿಗ್ಗಿ ತಿಳಿಸಿದೆ.
ಬೆಂಗಳೂರಿನ ಸ್ವಿಗ್ಗಿ ಗ್ರಾಹಕರು ಉಚಿತ ಡೆಲಿವರಿಗಳಿಗಾಗಿ ಸ್ವಿಗ್ಗಿ ಒನ್ ಸರ್ವೀಸ್ ಅನ್ನು ಹೆಚ್ಚಾಗಿ ಬಳಸಿದ್ದಾರಂತೆ. “ಸ್ವಿಗ್ಗಿ ಒನ್ ಅನ್ನು ಹೆಚ್ಚಾಗಿ ಬಳಸಿದ ಗ್ರಾಹಕರ ಪೈಕಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿಗರು ಸ್ವಿಗ್ಗಿ ಒನ್ ನ ಅತೀ ಹೆಚ್ಚು ಲಾಭಗಳನ್ನು ಪಡೆದುಕೊಂಡಿದ್ದರು, ಈ ಮೂಲಕ ಉಳಿತಾಯ ಮಾಡಿರುವ ಮೊತ್ತ ಬರೋಬ್ಬರಿ ರೂ.೧೦೦ ಕೋಟಿಗಳಂತೆ. ಮುಂಬೈ, ಹೈದ್ರಾಬಾದ್ ಹಾಗೂ ದೆಹಲಿ ನಗರಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆಯಂತೆ. ದೆಹಲಿಯ ಗ್ರಾಹಕರೊಬ್ಬರು ಬರೋಬ್ಬರಿ ರೂ.೨.೪೮ ಲಕ್ಷ ಉಳಿತಾಯ ಮಾಡಿರುವುದಾಗಿ ವರದಿ ತಿಳಿಸಿದೆ. ‘ಸ್ವಿಗ್ಗಿ ಒನ್’ ಒಂದು ಚಂದಾದಾರಿಕೆ ಯೋಜನೆಯಾಗಿದ್ದು, ಉಚಿತ ಡೆಲಿವರಿಗಳು, ಆಕರ್ಷಕ ದರಗಳು ಹಾಗೂ ಇನ್ನಿತರೆ ಸೌಕರ್ಯಗಳನ್ನು ಕಲ್ಪಿಸುತ್ತದೆ.
ಭಾರತದಲ್ಲಿ ೨೦೨೨ರಲ್ಲಿ ಸ್ವಿಗ್ಗಿ ಮೂಲಕ ಒಂದು ನಿಮಿಷದಲ್ಲಿ ಆರ್ಡರ್ ಮಾಡಿರುವ ಅತೀ ಹೆಚ್ಚಿನ ಸಂಖ್ಯೆಯ ಆಹಾರಗಳ ಪೈಕಿ ಬಿರಿಯಾನಿಗೆ ಮೊದಲ ಸ್ಥಾನವಂತೆ. ಒಟ್ಟು ೧೩೭ ಪ್ಲೇಟುಗಳಷ್ಟು ಆರ್ಡರ್‌ಗಳಾಗಿವೆಯಂತೆ. “೨೦೨೧ರಲ್ಲಿ ಒಂದು ನಿಮಿಷದಲ್ಲಿ ೧೧೫ ಬಿರಿಯಾನಿಗಳು ಮಾರಾಟವಾಗಿದ್ದರೆ, ೨೦೨೨ರಲ್ಲಿ ಇದರ ಸಂಖ್ಯೆ ೧೩೭ಕ್ಕೆ ಏರಿಕೆಯಾಗಿದೆ, ಅಂದರೆ ಒಂದು ಸೆಕೆಂಡಿಗೆ ೨.೨೮ ಬಿರಿಯಾನಿಗಳು ಮಾರಾಟವಾಗಿವೆಯಂತೆ. ಜೊತೆಗೆ ವಿದೇಶಿ ಸ್ವಾದಗಳಾದ ರವಿಯೊಲಿ (ಇಟಾಲಿಯನ್) ಹಾಗೂ ಬಿಬಿಂಬಾಪ್ (ಕೋರಿಯನ್) ಮೆಚ್ಚಿನ ಆಯ್ಕೆಗಳಾಗಿವೆಂತೆ.”
ಅತೀ ಹೆಚ್ಚಿನ ಬೇಡಿಕೆಯ ಆಹಾರ ಮಸಾಲೆ ದೋಸೆಗೆ ಎರಡನೇ ಸ್ಥಾನ ಹಾಗೂ ಚಿಕನ್ ಫ್ರೈಡ್ ರೈಸ್ ಗೆ ಮೂರನೇ ಸ್ಥಾನ ನೀಡಲಾಗಿದೆ. ಒಂದು ದಶಲಕ್ಷ ಆರ್ಡರ್ ಗಳೊಂದಿಗೆ ಸಮೋಸ ವರ್ಷದ ಅತೀ ಮೆಚ್ಚಿನ ಲಘು ಉಪಹಾರ (ಸ್ನ್ಯಾ ಕ್) ಆಗಿ ಹೊರಹೊಮ್ಮಿದೆ.
ಅದೇ ರೀತಿ ಮಾಂಸದ ಆರ್ಡರ್ ಗಳ ಪೈಕಿ ಚಿಕನ್ ಗೆ ಮೊದಲ ಸ್ಥಾನ ಸಂದಿದೆ. ಸ್ವಿಗ್ಗಿ ಮೂಲಕ ಬರೋಬ್ಬರಿ ೨೯.೮೬ ಲಕ್ಷ ಆರ್ಡರ್ ಗಳು ಆಗಿವೆ. ಮಾಂಸ ಆರ್ಡರ್ ಗಳ ವರ್ಗದಡಿ ಬೆಂಗಳೂರಿಗೆ ಮೊದಲನೇ ಸ್ಥಾನ ಲಭಿಸಿದ್ದರೆ, ಹೈದ್ರಾಬಾದ್ ಹಾಗೂ ಚೆನ್ನೈ ನಂತರದ ಸ್ಥಾನಗಳಲ್ಲಿವೆ.
ಸುದ್ದಿ ಮೂಲ: ಟೈಮ್ಸ್ ನೌ
Key words: 75,378 rupee- Swiggy-order- customer – Bangalore