ಮೈಸೂರು,ನವೆಂಬರ್,28,2022(www.justkannada.in): ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಸಂಸ್ಥೆ ಸರ್ಕಾರದ ಹೆಮ್ಮೆಯ ಸಂಸ್ಥೆಯಾಗಿದೆ. ಆದರೆ ಇದು ಖಾಸಗಿ ವಲಯದಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ. ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಪೈಪೋಟಿ ನೀಡಲು ಅಗತ್ಯವಾದ ನೆರವನ್ನು ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ನಗರದ ಕಲಾಮಂದಿರದಲ್ಲಿ ಇಂದು ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಆಯೋಜಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದಿಷ್ಟು..
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೂರದೃಷ್ಠಿಯುಳ್ಳ ಅರಸರಾಗಿದ್ದರು. ಅಂದಿನ ಮೈಸೂರು ಅರಸರು ದೂರದೃಷ್ಟಿ ಹಾಕಿಕೊಂಡು ಹಾಕಿದ ಬುನಾದಿ ಇಂದಿಗೂ ಸ್ತುತ್ಯಾರ್ಹವಾದುದು. ಮೈಸೂರು ಅರಸರು ಹಾಕಿಕೊಟ್ಟಿರುವ ಮೇಲ್ಪಂಕ್ತಿ ಇಂದು ಸರ್ಕಾರ ಸುಲಲಿತವಾಗಿ ನಡೆಸಲು ನೆರವಾಗಿದೆ. ಅಂದು ಮೈಸೂರು ಮಹಾರಾಜರು ನೀಡಿದ ಉತ್ತೇಜನದಿಂದಾಗಿ ತಾಂತ್ರಿಕ ಕ್ಷೇತ್ರದಲ್ಲಿ ಕರ್ನಾಟಕ ಜಾಗತೀಕವಾಗಿ ಪ್ರಮುಖ ಸ್ಥಾನಗಳಿಸಲು ಸಾಧ್ಯವಾಗಿದೆ. ಮೈಸೂರು ಅರಸರು ನೀಡಿರುವ ಕೊಡುಗೆ ಅಪಾರವಾದುದು ಎಂದರು.
ಕೆಆರ್ಎಸ್ ಅಣೆಕಟ್ಟೆಯ ಗೇಟ್ ಗಳ ದುರಸ್ತಿಗೊಳಿಸುವ ಹೊಣೆ ನನಗೆ ದೊರಕಿತ್ತು. ಅನೇಕರು ಏನಾದರೂ ಹೆಚ್ಚು ಕಡಿಮೆಯಾಗಿ ನೀರು ತಮಿಳುನಾಡಿಗೆ ಹರಿದು ಹೋದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ದುರಸ್ತಿ ಕಾರ್ಯ ಕೈಬಿಟ್ಟಿದ್ದರು. ಆದರೆ ನಾನು ಖಾಸಗಿ ವಲಯದ ಮೂಲಕ ಪರಿಣಿತರನ್ನು ಕರೆಯಿಸಿ 16 ಗೇಟ್ ಗಳನ್ನು ನಿರ್ಮಿಸಿದೆ. ಈಗ ಒಂದು ಹನಿ ನೀರು ಆಚೆ ಹೋಗುತ್ತಿಲ್ಲ ಎಂದರು.
ಕರ್ನಾಟಕ ತಾಂತ್ರಿಕ ಕ್ಷೇತ್ರ ಎನ್ನುತ್ತಾರೆ. ಇದಕ್ಕೆ ಕಾರಣ ಮೈಸೂರು ಸಂಸ್ಥಾನ. ಅಂದಿನ ತಂತ್ರಗಾರಿಕೆಯನ್ನೇ ಬಳಸಿಕೊಂಡು ಈ ಮಟ್ಟಕ್ಕೆ ಅಭಿವೃದ್ಧಿ ಹೊಂದಲಾಗಿದೆ. ಮಹಾರಾಜರಂತೆ ಸಂಸ್ಥಾನದ ಮಹಾರಾಣಿಯರ ಕೊಡುಗೆಯನ್ನು ಮರೆಯುವಂತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು
ಮೈಲಾಕ್ ಅಧ್ಯಕ್ಷ ಆರ್. ರಘು ಕೌಟಿಲ್ಯ, ಸಂಸ್ಥೆಯ ಆಧುನೀಕರಣ ಮತ್ತು ತಾಂತ್ರಿಕ ನೈಪುಣ್ಯತೆ ಹೆಚ್ಚಿಸಲು ಅಗತ್ಯ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಮೈಲ್ಯಾಕ್ ಕುರಿತು ಕಿರುಚಿತ್ರವನ್ನು ಬಿಡುಗಡೆಗೊಳಿಸಿದರು.
ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಸಿ.ಎಸ್. ನಿರಂಜನಕುಮಾರ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪಾ, ಕಾಡಾ ಅಧ್ಯಕ್ಷ ನಿಜಗುಣರಾಜು, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಮೈಲ್ಯಾಕ್ ಎಂಡಿ ಜಿ. ಕುಮಾರಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Key words: 75th Amrita Mahotsava – Mysore Paints and Varnish Limited- CM -Basavaraj Bommai