ಬೆಂಗಳೂರು,ಆಗಸ್ಟ್,15,2022(www.justkannada.in): ದೇಶದಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವಾಗಿದ್ದು ಈ ಅಂಗವಾಗಿ ರಾಜ್ಯದ ಜನತೆಗೆ ಸಿಹಿಸುದ್ಧಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಹೊಸ ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ.
ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ , ದೇಶಕ್ಕಾಗಿ ಹೋರಾಟಿದ ಮಹನೀಯರನ್ನ ಸ್ಮರಿಸಿದರು. ಸಹಸ್ರ ಸಂಖ್ಯೆಯ ಮಹನೀಯರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ತಿಳಿಸಿದರು.
ಹಲವು ಹೊಸ ಯೋಜನೆಗಳನ್ನ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ, ಕರ್ತವ್ಯದಲ್ಲಿದ್ದ ವೇಳೆ ಯೋಧ ಮೃತಪಟ್ಟರೆ, ಆ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ, 25 ಲಕ್ಷ ರೂ. ಪರಿಹಾರ ಕೊಡುತ್ತೇವೆ ಎಂದು ತಿಳಿಸಿದರು.
ಹಾಗೆಯೇ ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸಂಪೂರ್ಣವಾಗಿ ಶೌಚಾಲಯಗಳ ನಿರ್ಮಾಣ 250 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿ ಗಳು, ಭಜಂತ್ರಿ ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮೇದರು ಸೇರಿದಂತೆ ಇತರ ಕುಶಲಕರ್ಮಿಗಳಿಗೆ ತಲಾ 50 ಸಾವಿರ ರೂ. ಸಾಲದ ಸಹಾಯಧನ ಯೋಜನೆ. ಜಾರಿ ಮಾಡಲಾಗುತ್ತದೆ.
ರಾಜ್ಯದಲ್ಲಿ ಹೊಸದಾಗಿ 4050 ಅಂಗನವಾಡಿ ತೆರೆಯಲಾಗುವುದು. ಆ ಮೂಲಕ 16 ಲಕ್ಷ ಕುಟುಂಬಗಳಿಗೆ ಪೌಷ್ಟಿಕ ಆಹಾರ ಒದಗಿಸುತ್ತೇವೆ. ಇದರಿಂದಾಗಿ 8100 ಮಹಿಳೆಯರಿಗೂ ಇದರಿಂದ ಉದ್ಯೋಗವಕಾಶ ದೊರೆಯಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಹಾಗೆಯೇ ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ರೈತರ ವಿದ್ಯಾನಿಧಿ ಯೋಜನೆ ವಿಸ್ತರಿಸುತ್ತೇವೆ. ಸ್ವಚ್ಛತೆ ಆರೋಗ್ಯಕರ ವಾತಾವರಣಕ್ಕೆ ಆದ್ಯತೆ ನೀಡುತ್ತೇವೆ. ಎಲ್ಲರೂ ಶ್ರಮಿಸಿ ನವಕರ್ನಾಟಕ, ನವಭಾರತ ಕಟ್ಟೋಣ ಎಂದು ಕರೆ ನೀಡಿದರು.
Key words: 75th Independence Day-CM Basavaraja Bommai- announced- new projects.