ಬೆಂಗಳೂರು,ಮಾರ್ಚ್,16,2024(www.justkannada.in): ರಾಜ್ಯದ 7ನೇ ವೇತನ ಆಯೋಗವು ಇಂದು ವರದಿಯನ್ನು ಸಲ್ಲಿಸಿದ್ದು ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗದ ವರದಿಯನ್ನ ಇಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಯಿತು.
ವರದಿ ಸ್ವೀಕರಿಸಿ ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ವೇತನ ಆಯೋಗದ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿತ್ತು. ಈ ಅವಧಿಯು ಮಾರ್ಚ್ 15ರಂದು ಮುಕ್ತಾಯಗೊಂಡಿದೆ. ನಿನ್ನೆ ನಾನು ಮೈಸೂರಿನಲ್ಲಿದ್ದ ಕಾರಣ ವರದಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಇಂದು ವರದಿಯನ್ನು ಸ್ವೀಕರಿಸಲಾಗಿದೆ. ವರದಿಯಲ್ಲಿ ಕನಿಷ್ಠ ಮೂಲವೇತನವನ್ನು ರೂ.17,000 ದಿಂದ ರೂ.27,000 ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಇದರೊಂದಿಗೆ ಇನ್ನೂ ಅನೇಕ ಶಿಫಾರಸುಗಳಿದ್ದು ವರದಿಯನ್ನು ಆರ್ಥಿಕ ಇಲಾಖೆಗೆ ನೀಡಲಾಗಿದೆ. ಆರ್ಥಿಕ ಇಲಾಖೆಯು ವರದಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ ನಂತರ ನೀಡುವ ಸಲಹೆಗಳ ಆಧಾರದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.
ಏಳನೇ ವೇತನ ಆಯೋಗದ ವರದಿಯನ್ನು ಆರ್ಥಿಕ ಇಲಾಖೆ ಪರಿಶೀಲಿಸಲಿದೆ. ಕನಿಷ್ಠ ಮೂರ್ನಾಲ್ಕು ದಿನಗಳಾದರೂ ಪರಿಶೀಲನೆಗೆ ಕಾಲಾವಕಾಶ ಹಿಡಿಯುತ್ತದೆ. ಆರ್ಥಿಕ ಇಲಾಖೆ ತನ್ನ ನಿಲುವು ಏನೆಂಬುದು ತಿಳಿಸಿದ ನಂತರ ಏಳನೇ ವೇತನ ಆಯೋಗದ ಅಂತಿಮ ವರದಿ ಬಗ್ಗೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: 7th Pay Commission- report – 27.5% increase – salary – CM Siddaramaiah