ಯಾರಿಗೆ ಸಿಗಲಿದೆ ರಾಜ್ಯಾಧ್ಯಕ್ಷ ಪಟ್ಟ?

ಬೆಂಗಳೂರು:ಜುಲೈ-27: ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿರುವುದರಿಂದ ತೆರವಾಗುವ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಹಲವರ ಕಣ್ಣು ಬಿದ್ದಿದೆ. ಬಿಎಸ್​ವೈ ಅಧಿಕಾರಾವಧಿ ಏಪ್ರಿಲ್ 5ಕ್ಕೆ ಮುಕ್ತಾಯವಾಗಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆ ಮುಂದೂಡಲಾಗಿತ್ತು. ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಬಿ.ಶ್ರೀರಾಮುಲು, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ, ಸುರೇಶ್​ಕುಮಾರ್, ಗೋವಿಂದ ಕಾರಜೋಳ, ಯುವಕರ ಕೋಟಾದಲ್ಲಿ ಸಿ.ಟಿ.ರವಿ, ಸುನೀಲ್​ಕುಮಾರ್ ಹೆಸರುಗಳು ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿಬರುತ್ತಿದ್ದರೂ ಇವರೆಲ್ಲ ಮೊದಲಿಗೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಪೈಕಿ ಕೆಲವರು ಸಚಿವ ಸ್ಥಾನ ಇಲ್ಲವೆಂದರೆ, ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಈ ನಡುವೆ, ಸಂಸದರಾದ ನಳೀನ್​ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಿವಕುಮಾರ್ ಉದಾಸಿ ಹೆಸರನ್ನೂ ತೇಲಿಬಿಡಲಾಗಿದೆ.

ಜಾತಿ ಲೆಕ್ಕಾಚಾರ: ಉತ್ತರ ಕರ್ನಾಟಕ, ಕರಾವಳಿ, ಹೈದರಾಬಾದ್-ಕರ್ನಾಟಕ ಭಾಗಗಳ ಮುಖಂಡರೂ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕಾಗಿ ಜಾತಿ ಆಧಾರದ ಮೇಲೆ ಲಾಬಿ ನಡೆಸಿದ್ದಾರೆ. ಒಕ್ಕಲಿಗರಿಂದ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಹೆಸರು ಕೇಳಿ ಬಂದಿದ್ದರೆ, ದಲಿತರಿಂದ ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ, ಎನ್.ರವಿಕುಮಾರ್, ವೀರಶೈವ-ಲಿಂಗಾಯತ ಸಮುದಾಯದಿಂದ ಜಗದೀಶ್ ಶೆಟ್ಟರ್, ಶಿವಕುಮಾರ್ ಉದಾಸಿ, ಬ್ರಾಹ್ಮಣರಿಂದ ಸುರೇಶ್​ಕುಮಾರ್, ಹಿಂದುಳಿದ ವರ್ಗದಿಂದ ಕೆ.ಎಸ್.ಈಶ್ವರಪ್ಪ ಹಾಗೂ ಸುನೀಲ್​ಕುಮಾರ್ ಹೆಸರು ಚಾಲ್ತಿಯಲ್ಲಿದೆ. ಆದರೆ ರಾಜ್ಯಾಧ್ಯಕ್ಷ ಹುದ್ದೆ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನಿರ್ಣಯವನ್ನು ಅವಲಂಬಿಸಿದ್ದು, ಯಾವುದರ ಆಧಾರ ಮೇಲೆ ನಿರ್ಧರಿಸಲಾಗುತ್ತದೆ ಎಂಬುದು ಗುಪ್ತ್ ಗುಪ್ತ್.

ಉ.ಕ. ಕೂಗು: ಕಳೆದ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಜನರೇ ಕಮಲಕ್ಕೆ ಆಸರೆ ಆಗಿದ್ದರಿಂದ ಆ ಭಾಗಕ್ಕೆ ನೀಡಬೇಕೆಂಬ ಕೂಗೂ ಇದೆ.ಆರ್​ಎಸ್​ಎಸ್ ಹಿನ್ನೆಲೆಯವರನ್ನು ಅಧ್ಯಕ್ಷರಾಗಿಸುವ ಸಾಧ್ಯತೆಯೂ ಇದೆ.
ಕೃಪೆ:ವಿಜಯವಾಣಿ

ಯಾರಿಗೆ ಸಿಗಲಿದೆ ರಾಜ್ಯಾಧ್ಯಕ್ಷ ಪಟ್ಟ?
who-will-become-next-president-of-karnataka-state-bjp-party