ಮೈಸೂರು,ಅಕ್ಟೊಂಬರ್,02,2020(www.justkannada.in) : ವಿವಿಧ ಸಹಕಾರ ಕ್ಷೇತ್ರಗಳ ಮೈಸೂರು ವಿಭಾಗದ ಸುಮಾರು 8600 ಕೋಟಿ ರೂ.ಸಾಲ ನೀಡಲು ಆರ್ಥಿಕ ಸ್ಪಂದನ ಕಾರ್ಯಕ್ರಮದಡಿ ಯೋಜನೆ ರೂಪಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.ಮೈಸೂರು ವಿಭಾಗೀಯ ಮಟ್ಟದ ಆರ್ಥಿಕ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೋವಿಡ್ 19 ರ ಸಂದರ್ಭದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮ ಮಾಡಬೇಕು ಎಂಬುದು ಮುಖ್ಯಮಂತ್ರಿಗಳ ಉದ್ದೇಶವಾಗಿದೆ. ಈಗಾಗಲೇ, ಬೆಂಗಳೂರು ವಿಭಾಗಕ್ಕೆ ಚಾಲನೆ ನೀಡಲಾಗಿದೆ ಎಂದರು.
ಆರ್ಥಿಕ ಸ್ಪಂದನದ ಮೂಲಕ 39,300 ಕೋಟಿ ರೂ. ಸಾಲ ವಿತರಣೆ
ಆತ್ಮನಿರ್ಭರ ಯೋಜನೆ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ 39,300 ಕೋಟಿ ರೂ. ಹಣವನ್ನು ಆರ್ಥಿಕ ಸ್ಪಂದನದ ಮೂಲಕ ರೈತರು, ವ್ಯಾಪಾರಸ್ಥರು, ಸ್ವಸಹಾಯ ಸಂಘಗಳು, ಹಾಲು ಉತ್ಪಾದಕ ಸಂಘಗಳು, ಸಣ್ಣ – ದೊಡ್ಡ ಉದ್ದಿಮೆಗಳಿಗೆ ಸಾಲ ನೀಡಲಾಗುತ್ತಿದೆ. ಇದೊಂದು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಸಾಲದ ದುರ್ಬಳಕೆಯಾಗಬಾರದು
ನಾವು ಕೊಟ್ಟ ಸಾಲವನ್ನು ಯಾವ ರೀತಿ ಸದ್ಬಳಕೆಯಾಗುತ್ತದೆ ಎಂಬ ಬಗ್ಗೆ ಗಮನಹರಿಸುತ್ತೇವೆ. ಯಾವುದೇ ಕಾರಣಕ್ಕೂ ಸಾಲ ದುರ್ಬಳಕೆಯಾಗಕೂಡದು. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಸಾಲವನ್ನು ಎಲ್ಲರೂ ಪ್ರಾಮಾಣಿಕವಾಗಿ ಬಳಸಿ, ಮರುಪಾವತಿ ಮಾಡಿ ಯೋಜನೆಯನ್ನು ಯಶಸ್ವಿಗೊಳಿಸಿ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕೋವಿಡ್ 19ರ ಸಂದರ್ಭದಲ್ಲಿ ರಾಜ್ಯ ಪ್ರವಾಸ ಮಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಇಲಾಖೆ ವ್ಯಾಪ್ತಿಯಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ತಂದಿದ್ದಾರೆ. ಕೋವಿಡ್ ನಿರ್ವಹಣೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 53 ಕೋಟಿ ರೂ. ದೇಣಿಗೆಯನ್ನು ಸಹಕಾರಿಗಳಿಂದ ಸಂಗ್ರಹಿಸಿ ಕೊಟ್ಟಿದ್ದಾರೆ. ಈಗ ಸಂಕಷ್ಟದಲ್ಲಿರುವ ಎಲ್ಲ ತರಹದ ರೈತರಿಗೆ, ಕೂಲಿಕಾರ್ಮಿಕರಿಗೆ, ವ್ಯಾಪಾರಸ್ಥರಿಗೆ ಸಾಲ ನೀಡುವ ಆರ್ಥಿಕ ಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದೊಂದು ಉತ್ತಮ ಕಾರ್ಯಕ್ರಮ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಶಾಸಕ ಎಸ್.ಎ. ರಾಮದಾಸ್ ಮಾತನಾಡಿ, ಪಟ್ಟಣ, ಗ್ರಾಮೀಣ ಭಾಗಗಳ ಜನತೆಗೆ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಸಾಲ ನೀಡುವ ಸಲುವಾಗಿ ಆತ್ಮನಿರ್ಭರ ಭಾರತ ಯೋಜನೆ ಸಹಕಾರಿಯಾಗಿದೆ. ಇದರ ಮೂಲಕ ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಸಾಕ್ಷ್ಯಚಿತ್ರ ಪ್ರದರ್ಶನ
ಆತ್ಮನಿರ್ಭರ ಯೋಜನೆಯಡಿ ಹಮ್ಮಿಕೊಳ್ಳಲಾಗಿರುವ ಆರ್ಥಿಕ ಸ್ಪಂದನ ಕಾರ್ಯಕ್ರಮದ ಪ್ರಯುಕ್ತ ಸಹಕಾರ ಪತ್ರಿಕೆ ಹೊರತಂದ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ಬಳಿಕ ಸಹಕಾರ ಕ್ಷೇತ್ರ ನಡೆದುಬಂದ ಹಾದಿ ಬಗ್ಗೆ ಕಿರು ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಲಾಯಿತು.
ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣೆ
ರೈತರು, ಸ್ವಸಹಾಯ ಸಂಘಗಳು, ಸಣ್ಣ ಉದ್ದಿಮೆಗಳು, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳ ಮೈಸೂರು ವಿಭಾಗದ 8 ಜಿಲ್ಲೆಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಾಲದ ಚೆಕ್ ವಿತರಣೆ ಮಾಡಲಾಯಿತು.
ಶಾಸಕ ಎಲ್.ನಾಗೇಂದ್ರ, ಎಚ್.ವಿ.ರಾಜೀವ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಹಕಾರ ಸಂಘಗಳ ನಿಬಂಧಕ ಎಸ್.ಜಿಯಾವುಲ್ಲ, ಮೇಯರ್ ತಸ್ನಿಂ ಉಪಸ್ಥಿತರಿದ್ದರು.
key words : 8,600-crore-Mysore-Division-Loan-Scheme-Minister-S.T.Somashekhar