ಬೆಂಗಳೂರು:ಆ-19: ಮಳೆ ಬಂದಾಗ ಪ್ರವಾಹ ಉಂಟಾಗುವುದರ ಜತೆಗೆ ಮರಗಳು ಬಿದ್ದು ಅನಾಹುತಗಳು ಸಂಭವಿಸುತ್ತಿವೆ. ಅದರಂತೆ ಕಳೆದೆರಡು ವರ್ಷಗಳಿಂದ ಮಳೆ, ಗಾಳಿಗೆ 912 ಮರಗಳು, 5,029 ಮರದ ರೆಂಬೆಗಳು ಬಿದ್ದಿವೆ. ಹೀಗೆ ಮರಗಳು ಬಿದ್ದಾಗಲೆಲ್ಲ, ವಾಹನ ಸಂಚಾರಕ್ಕೆ ತಡೆಯಾಗುವುದರ ಜತೆಗೆ 200ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ.
ರಾಜಧಾನಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ತಗ್ಗು ಪ್ರದೇಶದ, ರಾಜಕಾಲುವೆ ಅಕ್ಕಪಕ್ಕದಲ್ಲಿನ ಮನೆಗಳ ನಿವಾಸಿಗಳು ಭಯದಲ್ಲಿಯೇ ಕಾಲ ಕಳೆಯುವ ಸ್ಥಿತಿಯಿದೆ. ಅದಕ್ಕಿಂತ ಹೆಚ್ಚಾಗಿ ವಾಹನಸವಾರರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಅದಕ್ಕೆ ನಿದರ್ಶನ ಎಂಬಂತೆ ಕಳೆದೆರಡು ವರ್ಷಗಳಲ್ಲಿ ಮಳೆ ಬಂದಾಗ ಬಿದ್ದ ಮರಗಳು ಆಸ್ತಿ ಪಾಸ್ತಿ ಹಾನಿಗೆ ಕಾರಣವಾಗುವುದರ ಜತೆಗೆ, ಪ್ರಾಣಹಾನಿಯೂ ಸಂಭವಿಸಿದೆ. ಇಷ್ಟಾದರೂ ಬಿಬಿಎಂಪಿ ಅಪಾಯಕಾರಿ ಮರಗಳ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದೆ.
ಮೇನಿಂದ ಸೆಪ್ಟೆಂಬರ್ವರೆಗೆ ಹೆಚ್ಚು: ಬಿಬಿಎಂಪಿ ವ್ಯಾಪ್ತಿಯಲ್ಲಿ 2018ರ ಏಪ್ರಿಲ್ನಿಂದ 2019ರ ಜೂನ್ವರೆಗೆ 912 ಮರಗಳು ಬಿದ್ದಿವೆ. ಅದರ ಜತೆಗೆ 5,029 ರೆಂಬೆಗಳು ತುಂಡಾಗಿ ಬಿದ್ದಿವೆ. ಎರಡೂ ವರ್ಷಗಳಲ್ಲಿ ಮೇ ಅಂತ್ಯದಿಂದ ಸೆಪ್ಟೆಂಬರ್ವರೆಗೆ ಅತಿಹೆಚ್ಚು ಮರಗಳು ಧರಾಶಾಹಿಯಾಗಿವೆ.
ವಾಹನಗಳು ಜಖಂ, ಪ್ರಾಣ ಹಾನಿ: ಮರಗಳು ಬೀಳುವುದರಿಂದ ಕಳೆದೆರಡು ವರ್ಷಗಳಲ್ಲಿ 200ಕ್ಕೂ ಹೆಚ್ಚು ವಾಹನಗಳು ಹಾನಿಗೊಳಗಾಗಿವೆ. ಅದರ ಜತೆಗೆ, ಈ ವರ್ಷದಲ್ಲಿಯೇ ಮರದ ರೆಂಬೆ ಬಿದ್ದು ಮೂವರು ಮೃತಪಟ್ಟಿದ್ದಾರೆ.
ಸಿಬ್ಬಂದಿ ಕೊರತೆ ನೆಪ
ಪ್ರತಿವರ್ಷ ಮಳೆಗಾಲಕ್ಕೂ ಮುನ್ನ ದುರ್ಬಲ ಮರಗಳನ್ನು ಪತ್ತೆ ಮಾಡಿ ಅದನ್ನು ತೆರವು ಮಾಡುತ್ತೇವೆಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ಈವರೆಗೆ ಆ ಕೆಲಸ ಸರಿಯಾಗಿ ಮಾಡುತ್ತಿಲ್ಲ. ಅದಕ್ಕೆ ಕಾರಣ ಕೇಳಿದರೆ ಸಿಬ್ಬಂದಿ ಕೊರತೆಯಿದೆ. ಸಮರ್ಪಕವಾಗಿ ಮರ ತೆರವು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳಲಾಗುತ್ತಿದೆ.
ಮರ ಬೀಳಲು ಕಾರಣಗಳೇನು?
ಬಿಬಿಎಂಪಿ ವ್ಯಾಪ್ತಿಯಲ್ಲಿ ರೇನ್ ಟ್ರೀ, ಮಹಾಗನಿ, ನೇರಳೆ, ನೆಲ್ಲಿ, ಹೊಂಗೆ, ಬೇವಿನಂತಹ 24 ವಿಧದ ಮರಗಳಿವೆ. ಅವುಗಳಲ್ಲಿ ಬಹುತೇಕ ಮರಗಳು ದೃಢವಾಗಿ ಬೆಳೆಯುವ ಸಾಮರ್ಥ್ಯ ಹೊಂದಿಲ್ಲ. ಅಲ್ಲದೆ, ಮರಗಳ ಬೇರು ಆಳಕ್ಕಿಳಿಯಲು ನಗರದಲ್ಲಿ ಸೂಕ್ತ ವಾತಾವರಣವಿಲ್ಲ. ಹೀಗಾಗಿ ಸ್ವಲ್ಪ ಜೋರಾಗಿ ಮಳೆ ಬಂದರೂ ಮರಗಳು ಉರುಳುತ್ತವೆ.
ಅರಣ್ಯ ವಿಭಾಗದಿಂದ 21 ತಂಡ ಮರ ಬಿದ್ದರೆ ತಕ್ಷಣ ತೆರವು ಮಾಡಲು ಈ ಬಾರಿ 21 ತಂಡಗಳನ್ನು ಅರಣ್ಯ ವಿಭಾಗ ನಿಯೋಜಿಸಿದೆ. ಆ ತಂಡಗಳಲ್ಲಿ 7ರಿಂದ 9 ಸಿಬ್ಬಂದಿ ಇರಲಿದ್ದು, ಮರ ಕತ್ತರಿಸಲು ಮತ್ತು ತೆರವು ಮಾಡಲು ಬೇಕಾದ ಸಲಕರಣೆ ಒದಗಿಸಲಾಗಿದೆ. ಮರ, ರೆಂಬೆಗಳು ಬಿದ್ದರೆ ಶೀಘ್ರದಲ್ಲಿ ತೆರವು ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.
7 ಲಕ್ಷ ಸಸಿ ನೆಟ್ಟಿರುವ ಪಾಲಿಕೆ
ಬಿಬಿಎಂಪಿ ಅಧಿಕಾರಿಗಳ ಲೆಕ್ಕದ ಪ್ರಕಾರ 2010-11ನೇ ಸಾಲಿನಿಂದ 2015-16ನೇ ಸಾಲಿನವರೆಗೆ 8 ವಲಯಗಳಲ್ಲಿ 7.47 ಲಕ್ಷ ಸಸಿಗಳನ್ನು ನೆಡಲಾಗಿದೆ. ಈ ಸಸಿಗಳನ್ನು ನೆಟ್ಟು ಪೋಷಿಸಲು ಬರೋಬ್ಬರಿ 18.79 ಕೋಟಿ ರೂ. ವ್ಯಯಿಸಲಾಗಿದೆ.
18 ಸಾವಿರ ಮರಗಳ ಹನನ
ಹಸಿರೀಕರಣ ಮಾಡಲು ಹಲವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿ ಕೊಳ್ಳುತ್ತಾರೆ. ಆದರೆ, ಮರಗಳನ್ನು ಕಡಿಯುವುದು ಕೂಡ ಅವ್ಯಾಹತವಾಗಿ ಸಾಗಿದೆ. 2008-09ರಿಂದ 2016- 17ರವರೆಗೆ ಮೆಟ್ರೋ ಕಾಮಗಾರಿ, ಅಭಿವೃದ್ಧಿ ಯೋಜನೆ, ರಸ್ತೆಬದಿಯಲ್ಲಿದ್ದ ಮರಗಳು ಹಾಗೂ ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿ ಪರಿಗಣಿಸಿ 17,964 ಮರಗಳನ್ನು ಕಡಿಯಲಾಗಿದೆ. ಅದರ ಜತೆಗೆ ವಿದ್ಯುತ್ ತಂತಿಗಳಿಗೆ, ಮನೆಗಳ ಮೇಲೆ ಬೀಳುತ್ತದೆ ಎಂಬುದು ಸೇರಿ ಇನ್ನಿತರ ಕಾರಣಕ್ಕಾಗಿ 35,220 ಮರಗಳ ರೆಂಬೆ ಕತ್ತರಿಸಲಾಗಿದೆ.
ಕೃಪೆ:ವಿಜಯವಾಣಿ