ಮೈಸೂರು,ನವೆಂಬರ್,22,2022(www.justkannada.in): ಮೈಸೂರು ವಿಶ್ವವಿದ್ಯಾನಿಲಯ ಬಡಾವಣೆಯ ಶಾರದಾ ಮಹಿಳಾ ಸಂಘ ಮತ್ತು ವಿ ವಿ ಬಡಾವಣೆ ಕ್ಷೇಮಾಭಿವೃದಿ ಸಂಘಗಳು ಸಂಯುಕ್ತ ಆಶ್ರಯದಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಮೂಹ ನೃತ್ಯ, ಕನ್ನಡ ಗಾಯನ, ಸನ್ಮಾನ ಸಮಾರಂಭ, ಬಹುಮಾನ ವಿತರಣೆ ಹಾಗೂ ಕನ್ನಡ ರಸಮಂಜರಿ ಕಾರ್ಯಕ್ರಮವನ್ನು ನಡೆಸಲಾಯಿತು.
ಬಡಾವಣೆಯ ಹಿರಿಯ ನಾಗರೀಕರಾದ ಕಾವೇರಿ ರಾಮನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೆ ಪುಷ್ಪ ಮಾಚಯ್ಯ ಮಾಜಿ ಅಧ್ಯಕ್ಷರು, ಶಾರದಾ ದೇವಿ ಮಹಿಳಾ ಸಂಘ, ರಾಮಕೃಷ್ಣನಗರ, ಮೈಸೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶಾರದಾ ಮಹಿಳಾ ಸಂಘದ ಅಧ್ಯಕ್ಷರಾದ ಡಾ. ದೇಚಮ್ಮ, ಕಾರ್ಯದರ್ಶಿಗಳಾದ ರಾಧಿಕಾ ಶ್ರೀಧರ್ ಹಾಗು ವಿ ವಿ ಬಡಾವಣೆ ಕ್ಷೇಮಾಭಿವೃದಿ ಸಂಘದ ಅಧ್ಯಕ್ಷರಾದ ಪ್ರೊ. ಕೆ ಎ ನಾಣಯ್ಯ ಕಾರ್ಯದರ್ಶಿಗಳಾದ ಡಾ. ಕೆ. ಎಸ್ ಗೋವಿಂದರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೀಪ ಬೆಳಗುವ ಮೂಲಕ ಅತಿಥಿಗಳು ರಾಜ್ಯೋತ್ಸವ ಚಟುವಟಿಕೆಗಳಿಗೆ ಚಾಲನೆ ನೀಡಿದರು, ಕಾರ್ಯದರ್ಶಿಗಳಾದ ರಾಧಿಕಾ ಶ್ರೀಧರ್ ಶಾರದಾ ಮಹಿಳಾ ಸಂಘ ನಡೆದು ಬಂದ ದಾರಿಯನ್ನು ಪರಿಚಯಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳು ಮಾತನಾಡುತ್ತಾ, ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ ರಾಜಕೀಯ, ಸಾಹಿತ್ಯ ಸಿನಿಮಾ ಮತ್ತು ಸಾಂಸ್ಕೃತಿಕ ದಿಗ್ಗಜರ ಕಾಯಕ ಹಾಗು ಕೊಡುಗೆಗಳನ್ನು ಸ್ಮರಿಸಿದರು.
ಅಧ್ಯಕ್ಷರು ಭಾಷಣದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನೆದು, ಶಾಲಾ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದನ್ನು ಮೆಲಕು ಹಾಕುತ್ತ, ಜಯ ಭಾರತ ಜನನಿಯ ತಾನು ಜಾತೆ ಜಯಹೇ ಕರ್ನಾಟಕ ಮಾತೆ ಹಾಡುವ ಮೂಲಕ ಸಭಿಕರ ಪ್ರಶಂಸೆಗೆ ಪಾತ್ರರಾದರು . ವಿ ವಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪ್ರೊ. ಕೆ ಎ ನಾಣಯ್ಯ ಮಾತನಾಡುತ್ತಾ, ಮಹಿಳಾ ಸಂಘವು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದನ್ನು ಶ್ಲಾಘಿಸುತ್ತಾ, ಬಡಾವಣೆಯ ಮಕ್ಕಳ ಮತ್ತು ಮಹಿಳೆಯರ ಪ್ರತಿಭಾನ್ವೇಷಣೆಗೆ ಶಾರದಾ ಮಹಿಳಾ ಸಂಘ ಅತ್ಯುತ್ತಮ ವೇದಿಕೆಯಾಗಿದೆ ಎಂದರು.
ವೇದಶ್ರೀ ಅವರು ಕನ್ನಡ ಭಾಷೆಯ ಇತಿಹಾಸ, ಹಿರಿಮೆ-ಗರಿಮೆಗಳನ್ನು ಮನದಟ್ಟಾಗುವಂತೆ ತಿಳಿಸಿದರು. ಅನಂತರ ಬಡಾವಣೆಯ ವಿವಿಧ ಸಾಂಸ್ಕೃತಿಕ ತಂಡಗಳಿಂದ ಕನ್ನಡ ಗೀತಗಾಯನ, ಕೋಲಾಟ, ವಿವಿಧ ಸಾಮೂಹಿಕ ನೃತ್ಯ ಜಾನಪದ ನೃತ್ಯ ಮತ್ತು విలు ತಬಲಾ ವಾದನ ಇತ್ಯಾದಿ ವರ್ಣರಂಜಿತ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ಮಹಿಳಾ ಸಂಘದ ಪದಾಧಿಕಾರಿಗಳಿಂದ ಮೂಡಿಬಂದ ಕೋಲಾಟ ನೃತ್ಯ ಅತ್ಯಂತ ಮನಮೋಹಕವಾಗಿತ್ತು. ಕಾರ್ಯಕ್ರಮದ ಅಂಗವಾಗಿ ಭಾರತ ಸೇನೆಯ ಮಾಜಿ ಯೋಧರಾದ ಗಣಪತಿ ಎಂ ಎ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸುಪರ್ಣಾ & ಗೀತಾ – ನಿರೂಪಣೆ, ಪುಷ್ಪಲತಾ & ಸಂಗಡಿಗರು- ನಾಡಗೀತೆ ಗಾಯನ, ಲಕ್ಷ್ಮಿ- ಪ್ರಾರ್ಥನಾ ನೃತ್ಯ ಪ್ರೊ. ಕೈಸರ್ ನಿಕ್ಕಮ್ – ಸ್ವಾಗತ, ಭೂಮಿಕಾ – ಗೀತಗಾಯನ, ಸಮ್ಮದ್ ಎಂಗೌಡ- ತಬಲಾ, ಕುಮಾರಿ ಸೃಷ್ಟಿ & ತಂಡ- ಸಮೂಹ ನೃತ್ಯ ಹಾಗು ವಂದನಾರ್ಪಣೆಯನ್ನು ಕಾವ್ಯ ನೆರವೇರಿಸಿದರು.
ಬೆಂಗಳೂರಿನಿಂದ ಆಗಮಿಸಿದ ಅಂಕಿತಾ ಸುಹಾಸ್ ಸಂಗೀತ ರಸಮಂಜರಿ ನಡೆಸಿಕೊಟ್ಟರು. ಕಾರ್ಯಕ್ರಮ ಸುಮಧುರವಾದ ಕನ್ನಡ ಭಕ್ತಿಗೀತೆ, ಭಾವಗೀತ ಹಾಗು ನಾಡಗೀತೆ ಹಾಡುವ ಮೂಲಕ ಎಲ್ಲರ ಮನಸೂರೆಗೊಂಡರು. ಬಡಾವಣೆಯ ನೂರಾರು ಜನ ಕಾರ್ಯಕ್ರಮವನ್ನು ವೀಕ್ಷಿಸಿದರು. ಕಾರ್ಯಕ್ರಮದ ಸಂಪೂರ್ಣ ಮೇಲ್ವಿಚಾರಣೆ ಮತ್ತು ಉಸ್ತುವಾರಿವಹಿಸಿದ ಡಾ. ದೇಚಮ್ಮ ಹಾಗು ರಾಧಿಕಾ ಶ್ರೀಧರ್ ಅವರ ಪಾತ್ರ ಅತಿ ಮಹತ್ವದ್ದಾಗಿತ್ತು.
Key words: Celebration – Kannada Rajyotsava -Sharada Mahila Sangh – Mysore