ಬೆಂಗಳೂರು:ಆ-19:(www.justkannada.in) ಸಲ್ಮಾನ್ ಖಾನ್ ಹಾಗೂ ಸುದೀಪ್ ಅಭಿನಯದ ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ ದಬಾಂಗ್-3 ಚಿತ್ರ ಕನ್ನಡದಲ್ಲಿ ಕೂಡ ಡಬ್ ಆಗಲಿದ್ದು, ಕನ್ನಡದ ಡಬ್ಬಿಂಗ್ ವರ್ಷನ್ಗೆ ಸುದೀಪ್ ಅವರೇ ಡಬ್ಬಿಂಗ್ ಮಾಡುತ್ತಾರಂತೆ.
ಈ ಮೂಲಕ ಸಲ್ಮಾನ್ ಖಾನ್ ಅವರ ಅಚ್ಚುಮೆಚ್ಚಿನ ಪಾತ್ರ ಚುಲ್ಬುಲ್ ಪಾಂಡೆ ಈ ವರ್ಷ ಕನ್ನಡ ಮಾತನಾಡುತ್ತಾರೆ ಎಂಬುದು ಪ್ರೇಕ್ಷಕರ ನಿರೀಕ್ಷೆ. ಡಿಸೆಂಬರ್ನಲ್ಲಿ ಬಿಡುಗಡೆಯಾಗಲಿರುವ ದಬಾಂಗ್-3 ಚಿತ್ರದ ಒಂದಷ್ಟು ಭಾಗದ ಚಿತ್ರೀಕರಣ ಕೂಡ ಮುಗಿದಿದೆ. ಈ ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡಲು ನಿರ್ಧರಿಸಲಾಗಿದೆ.
ಇದೇ ಮೊದಲ ಬಾರಿಗೆ ಸುದೀಪ್ ನಟನೆಯ ಪರಭಾಷೆಯ ಸಿನಿಮಾವೊಂದು ಕನ್ನಡಕ್ಕೆ ಡಬ್ ಆಗುತ್ತಿದ್ದು, ಅದಕ್ಕೆ ಸುದೀಪ್ ಅವರೇ ಧ್ವನಿ ನೀಡಿದರೆ ಮಾರುಕಟ್ಟೆಯ ವಿಸ್ತಾರ ಹೆಚ್ಚಾಗುತ್ತದೆ. ಮತ್ತು ಅವರ ಅಭಿಮಾನಿಗಳು ಸಿನಿಮಾವನ್ನು ಹೆಚ್ಚೆಚ್ಚು ನೋಡುತ್ತಾರೆ ಎಂಬುದು ನಿರ್ಮಾಣ ಸಂಸ್ಥೆಯ ಆಲೋಚನೆಯಾಗಿದೆ.
ಇನ್ನು ದಬಾಂಗ್ ಜತೆಯಲ್ಲಿ ತೆಲುಗಿನ ’ಸೈರಾ ನರಸಿಂಹ ರೆಡ್ಡ” ಸಿನಿಮಾ ಕೂಡಾ ಕನ್ನಡಕ್ಕೆ ಡಬ್ಬಿಂಗ್ ಆಗುತ್ತಿದೆ. ಆದರೆ ಅದಕ್ಕೆ ಸುದೀಪ್ ಧ್ವನಿ ನೀಡುತ್ತಾರೋ ಇಲ್ಲವೋ ಗೊತ್ತಾಗಿಲ್ಲ. ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲ್ಲುತ್ತಿಲ್ಲ ಎನ್ನುವ ಹೊತ್ತಿನಲ್ಲಿ ಇಷ್ಟು ದೊಡ್ಡ ಸಿನಿಮಾವೊಂದು ಕನ್ನಡಕ್ಕೆ ಡಬ್ಬಿಂಗ್ ಆಗಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಜತೆಗೆ ಅದಕ್ಕೆ ಸುದೀಪ್ ಅವರೇ ಧ್ವನಿ ನೀಡಲು ಒಪ್ಪಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಪ್ರಭುದೇವ ದಬಾಂಗ್-3 ಅನ್ನು ನಿರ್ದೇಶಿಸುತ್ತಿದ್ದು, ಕಿಚ್ಚ ಸುದೀಪ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಬಾಂಗ್ ಸಿನಿಮಾಗೆ ಸುದೀಪ್ ಅವರೇ ಬೇಕು ಎಂದು ಸಲ್ಮಾನ್ ಖಾನ್ ಮತ್ತು ಪ್ರಭುದೇವ ಅವರು ಒತ್ತಾಯ ಮಾಡಿ ಸುದೀಪ್ ಅವರ ಡೇಟ್ಸ್ ಪಡೆದುಕೊಂಡಿದ್ದಾರೆ. ಸುದೀಪ್ ಈಗಾಗಲೇ ತೆಲುಗಿನ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕಾಗಿ ಹೈದರಾಬಾದ್ನಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಇದೇ ವೇಳೆ ಕನ್ನಡದ ಎರಡು ಚಿತ್ರಗಳಲ್ಲಿ ಕೂಡ ಬ್ಯುಸಿಯಾಗಿದ್ದಾರೆ. ಪೈಲ್ವಾನ್ ಈಗಾಗಲೇ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಕೋಟಿಗೊಬ್ಬ- 3 ಕೂಡ ಆರಂಭವಾಗಿದೆ. ಇನ್ನೊಂದೆಡೆ ರವಿಚಂದ್ರನ್ ನಿರ್ದೇಶನದ ರವಿ ಬೋಪಣ್ಣ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದರ ಚಿತ್ರೀಕರಣದಲ್ಲಿ ಕೂಡ ತೊಡಗಿಕೊಂಡಿದ್ದಾರೆ.
ಈ ಬ್ಯುಸಿ ಸಮಯದ ನಡುವೆ ದಬಾಂಗ್-3 ಚಿತ್ರದ ಸುದೀಪ್ ಪಾತ್ರದ ಕೆಲ ಭಾಗ ಚಿತ್ರೀಕರಣವಾಗಿದ್ದು, ಇನ್ನೊಂದು ಶೆಡ್ಯೂಲ್ಗೆ ಅವರು ಪೈಲ್ವಾನ್ ರಿಲೀಸ್ ಆದ ಮೇಲೆ ಅಂದರೆ ಸೆಪ್ಟಂಬರ್ 12ರ ನಂತರ ಹೋಗಲಿದ್ದಾರೆ. ಇದೇ ಸಮಯದಲ್ಲಿ ದಬಾಂಗ್-3ಯನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲು ನಿರ್ಮಾಣ ಸಂಸ್ಥೆ ಪ್ಲಾನ್ ಮಾಡಿದೆ.