ಮೈಸೂರು,ನವೆಂಬರ್,25,2022(www.justkannada.in): ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಲು ಮಹಿಳಾವಾದಿಯೇ ಆಗಬೇಕಿಲ್ಲ. ನಮ್ಮೊಳಗಿನ ಮಾನವೀಯತೆ ಹಾಗೂ ಅಂತಃಕರಣ ಮಹಿಳಾ ಸಬಲೀಕರಣದ ಉನ್ನತಿಗೆ ನೆರವಾಗಬಲ್ಲದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ವಿ.ಆರ್.ಶೈಲಜಾ ತಿಳಿಸಿದ್ದಾರೆ.
ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನದ ಅಂಗವಾಗಿ ನಡೆದ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡಲು ಮಹಿಳಾವಾದಿ ಅಥವಾ ಸ್ತ್ರೀವಾದಿ ಆಗಬೇಕಿಲ್ಲ. ಕುಟುಂಬದ ಜವಾಬ್ದಾರಿ ಜೊತೆಗೆ ಮಹಿಳೆ ಕಚೇರಿ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುವ ಜಾಣ್ಮೆ ಮಹಿಳೆಯರಿಗೆ ದಕ್ಕಿದೆ. ಹೆಣ್ಣನ್ನು ಭೂಮಿತಾಯಿ ಎನ್ನುತ್ತೇವೆ. ವೇದಗಳಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಲಾಗಿದೆ. 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಶೇ.50ರಷ್ಟು ಮಹಿಳೆಯರೆ ಇದ್ದಾರೆ. ಮಹಿಳೆಯರಿಗೆ ಯಾವುದೇ ಸ್ಥಾನಮಾನವನ್ನುಕೊಡಬೇಕಾದ ಅವಶ್ಯಕತೆ ಇಲ್ಲ. ಬದಲಿಗೆ ಎಲ್ಲವನ್ನೂ ಪಡೆಯುವ ಶಕ್ತಿ ಆಕೆಗೆ ಕರಗತವಾಗಿದೆ ಎಂದರು.
ಇಂದು ಮಹಿಳೆಯರು ಮನೆ ಮತ್ತು ಇತರೆ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ ಇದ್ದಾರೆ. ನಾನು ಮೈಸೂರು ವಿವಿ ವಿದ್ಯಾರ್ಥಿನಿ. ಇಲ್ಲೇ ಓದಿ ಇದೀಗ ಇಲ್ಲೇ ಕೂತು ಕೆಲಸ ಮಾಡಲು ಖುಷಿ ಆಗುತ್ತಿದೆ. ಇಂದು ಮಹಿಳೆಯರು ಬಸ್ ಡ್ರೈವರ್, ಗಾರ್ಮೆಂಟ್ಸ್, ವಿಮಾನಯಾನ, ನಾನಾ ಕಂಪನಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.
ಮಹಿಳೆಯರು ತಮ್ಮೊಳಗಿರುವ ಕೀಳರಿಮೆ ಬಿಡಬೇಕು. ಇಂದು ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿದೆ. ಹುಟ್ಟಿದಾಗಿನಿಂದಲೂ ಮಹಿಳೆ ನಾನಾ ತರಹದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಪ್ರತಿದಿನ ವರದಕ್ಷಿಣೆ ಕಾಟ, ಲೈಂಗಿಕ ಕಿರುಕುಳ, ವೇಶ್ಯಾವಾಟಿಕೆ ಅಂತಹ ಹತ್ತಾರು ಪ್ರಕರಣಗಳು ದಾಖಲಾಗುತ್ತಿದೆ. ಶ್ರದ್ಧಾ ಪ್ರಕರಣ ನೆನೆದರೆ ಮಾನವೀಯತೆ ಮರೆತು ನಾವೆಲ್ಲಾ ಬದುಕುತ್ತಿದ್ದೇವೆ ಎನಿಸುತ್ತದೆ. ಬಸವಣ್ಣ, ಬುದ್ಧ ಹಾಗೂ ಶಂಕರಾಚಾರ್ಯರು ತಮ್ಮ ಕಾಲಘಟ್ಟದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯತೆ ನೀಡಿದ್ದರು. ಇಂದಿರಾ ಗಾಂಧಿ ಎಷ್ಟೋ ಮಹಿಳೆಯರಿಗೆ ಸ್ಪೂರ್ತಿ. ಸರೋಜಿನಿ ನಾಯ್ಡು, ಕಲ್ಪನಾ ಚಾವ್ಲಾ ಎಲ್ಲರೂ ಮಹಿಳೆಯರ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ವಕೀಲೆ ಶಾರದಾ ಅವರು ಮಾತನಾಡಿ, ಇಂದು ನಿತ್ಯ ಮಹಿಳೆಯರು ನಾನಾ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ಪ್ರತಿ 11 ನಿಮಿಷಕ್ಕೆ ಮಹಿಳೆಯರು ಕುಟುಂಬದಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಆದರೆ ದೌರ್ಜನ್ಯ ತಡೆಗೆ ಕಾನೂನು ಬಿಗಿಯಾಗಿದೆ. ಆದರೆ ಮಹಿಳೆ ಧ್ವನಿ ಎತ್ತಬೇಕು. ದೂರು ನೀಡಬೇಕು. ಮಹಿಳೆಯರು ಕೆಲಸ ಮಾಡುವ ಜಾಗದಲ್ಲಿ ದೌರ್ಜನ್ಯ ನಡೆದರೆ ಆಂತರಿಕ ಸಮಿತಿಗೆ ದೂರು ನೀಡಬೇಕು. ಸೈಬರ್ ದೌರ್ಜನ್ಯ, ಅತ್ಯಾಚಾರ, ಕಿರುಕುಳ, ಲೈಂಗಿಕ ದೌರ್ಜನ್ಯ, ಆಸ್ಯಿಡ್, ವರದಕ್ಷಿಣೆ, ಸತಿಸಹಗಮನ ಎಲ್ಲವೂ ಅಪರಾಧ. ಹಲವು ಕಾಯಿದೆಗಳಿಂದ ಮಹಿಳೆಯರು ರಕ್ಷಣೆ ಪಡೆಯಬೇಕು ಎಂದರು.
ಡಿಸಿಪಿ ಗೀತಾ ಪ್ರಸನ್ನ, ಸಿಂಡಿಕೇಟ್ ಸದಸ್ಯೆ ವೈ.ಕೆ.ಪವಿತ್ರಾ, ಸ್ಪರ್ಶ್ ಅಧ್ಯಕ್ಷೆ ಆಶಾ ಮಂಜರಿ ಸೇರಿದಂತೆ ಇತರರು ಭಾಗವಹಿಸಿದ್ದರು.
Key words: Health – society- women -empowerment- Mysore University – Shailaja