ಬೆಂಗಳೂರು,ಡಿಸೆಂಬರ್,17,2022(www.justkannada.in): ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸಹಾಯಕ ಪ್ರಾಧ್ಯಾಪಕರುಗಳ / ಉಪನ್ಯಾಸಕರ ಮಧ್ಯಂತರ ವರ್ಗಾವಣೆಯನ್ನು ಸ್ಥಗಿತಗೊಳಿಸುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿದ್ಧರಾಮಯ್ಯ ಹೇಳಿರುವುದಿಷ್ಟು…
ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸಹಾಯಕ ಪ್ರಾಧ್ಯಾಪಕರುಗಳ ವರ್ಗಾವಣೆಯನ್ನು ಮಧ್ಯಂತರ ಅವಧಿಯ ಡಿಸೆಂಬರ್ ಮಾಹೆಯಲ್ಲಿ ನಡೆಸಲು ಆಯುಕ್ತಾಲಯ ಪ್ರಕಟಣೆಯನ್ನು ಹೊರಡಿಸಿದೆ. ಸರ್ಕಾರವು ವರ್ಗಾವಣೆಗಳಿಗೆ ತೋರಿಸುತ್ತಿರುವ ಆಸಕ್ತಿ, ಅಭಿವೃದ್ಧಿ ವಿಷಯಗಳಿಗೆ ಹಾಗೂ ನೇಮಕಾತಿಗಳಿಗೆ ತೋರಿಸುತ್ತಿಲ್ಲ.
ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ವರ್ಗಾವಣೆ ಆಗಿ 6 ತಿಂಗಳು ಮಾತ್ರ ಆಗಿದೆ. ಮತ್ತೆ ಈಗ ಎರಡನೆ ಬಾರಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ವರ್ಗಾವಣೆ ಎನ್ನುವುದು ಆಡಳಿತಾತ್ಮಕ ಮತ್ತು ಸಾರ್ವಜನಿಕ ಅನುಕೂಲಕ್ಕೆ ಮಾಡಬೇಕಾದ ಚಟುವಟಿಕೆಯೆ ಹೊರತು, ಇಲಾಖೆಗಳಿಗೆ ಸಚಿವರುಗಳಿಗೆ, ಸರ್ಕಾರಕ್ಕೆ ಅದೊಂದು ಚಟವಾಗಬಾರದು.
ಸರ್ಕಾರದ ಯಾವುದಾದರೊಂದು ಇಲಾಖೆ ಒಂದೇ ವರ್ಷದಲ್ಲಿ ಎರಡು ಮೂರು ಬಾರಿ ವರ್ಗಾವಣೆ ಮಾಡಿರುವ ಉದಾಹರಣೆಗಳಿವೆಯೇ? ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುತ್ತೇನೆಂದು ಹೇಳಿ ವರ್ಷದಲ್ಲಿ ಎರಡು ಮೂರು ಬಾರಿ ಅಧಿಸೂಚನೆ ಹೊರಡಿಸಿಕೊಂಡು ಕೂತಿದೆ. ಕುಲಪತಿಗಳ ನೇಮಕಾತಿ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮುಂತಾದ ವಿಷಯಗಳಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿವೆಯೆಂದು ಆಡಳಿತ ಪಕ್ಷದ ಶಾಸಕ, ಸಹಚರರುಗಳೆ ಬಹಿರಂಗ ಹೇಳಿಕೆ ಕೊಡುತ್ತಿದ್ದಾರೆ. ಇಂಥದ್ದರ ಮಧ್ಯೆ ಇಲಾಖೆಯನ್ನು ಸುಧಾರಿಸುವ ಬದಲು ಅರಾಜಕತೆಯನ್ನು ಸೃಷ್ಟಿ ಮಾಡಲಾಗುತ್ತಿದೆ.sidd
ಎನ್.ಇ.ಪಿ. ಎಂಬುದು ಕೇವಲ ಹೆಸರಿಗೆ ಮಾತ್ರದ ಘೋಷಣೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಎನ್ನುವುದು ಪಾತಾಳಕ್ಕೆ ತಲುಪಿದೆ. ಸರಿಯಾಗಿ ಪಠ್ಯ ಪುಸ್ತಕಗಳನ್ನು, ರೆಫರೆನ್ಸ್ ಪುಸ್ತಕಗಳನ್ನು ಒದಗಿಸಲಾಗುತ್ತಿಲ್ಲ, ಲೈಬ್ರರಿಗಳಲ್ಲೂ ಹಳೆಯ ಪುಸ್ತಕಗಳೇ ಇವೆ. ವಿಶ್ವವಿದ್ಯಾನಿಲಯಗಳಲ್ಲೂ ಈ ಕುರಿತು ಗೊಂದಲ ಉಂಟಾಗಿ 8 ತಿಂಗಳಾದರೂ ಕೆಲವು ಸೆಮಿಸ್ಟರ್ ಗಳ ಫಲಿತಾಂಶವೇ ಪ್ರಕಟವಾಗಿಲ್ಲ.
ಹಿಂದಿನ ವರ್ಗಾವಣೆಯಲ್ಲಿ ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ನಗರ ಪ್ರದೇಶಗಳಲ್ಲಿ ನಿರಂತರವಾಗಿ 20 ವರ್ಷ ಸೇವೆ ಸಲ್ಲಿಸಿದವರು ಮತ್ತೆ ಅದೇ ನಗರದ ಬೇರೆ ಕಾಲೇಜಿಗೆ ವರ್ಗಾವಣೆಗೊಂಡಿರುವುದು ವಿಪರ್ಯಾಸ.
ಸರ್ಕಾರವೇ ರೂಪಿಸಿರುವ ನಿಯಮಾವಳಿಗೆ ವಿರುದ್ಧವಾಗಿ ಈ ಮಧ್ಯಂತರ ಅವಧಿಯ ಡಿಸೆಂಬರ್ ಮಾಹೆಯಲ್ಲಿ ವರ್ಗಾವಣೆ ಮಾಡುವುದರಿಂದ ವರ್ಗಾವಣೆಗೊಳ್ಳುವ ಸಹಾಯಕ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ವರ್ಷದ ಮಧ್ಯದಲ್ಲಿ ವರ್ಗಾವಣೆಯಾದರೆ ಅಧ್ಯಾಪಕರು, ಮನೆ, ಮಡದಿ, ಮಕ್ಕಳನ್ನು ಬಿಟ್ಟು ಎಲ್ಲಿಗೆ ಹೋಗಲು ಸಾಧ್ಯ? ಅವರೂ ಮನುಷ್ಯರಲ್ಲವೇ? ಬಿಜೆಪಿಯವರು ಅಧ್ಯಾಪಕರುಗಳನ್ನು ರೋಬೋಟ್‍ಗಳೆಂದು ಭಾವಿಸಿದ್ದಾರೆಯೇ? ಅಧ್ಯಾಪಕರನ್ನು ಕಾಲವಲ್ಲದ ಕಾಲದಲ್ಲಿ ವರ್ಗಾವಣೆ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲವೇ? ಎಂದು ಸರ್ಕಾರಕ್ಕೆ ಸಿದ‍್ಧರಾಮಯ್ಯ ಪ್ರಶ್ನಿಸಿದ್ದಾರೆ.
ಎನ್‍ಇಪಿ ಹೆಸರಲ್ಲಿ ಹಲವಾರು ತಂತ್ರಾಂಶಗಳನ್ನು, ಆಪ್ ಗಳನ್ನು ಮಾಡುವುದಾಗಿ ಹೇಳಿ ಅದರಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿರುವ ಕುರಿತು ಸ್ವತಃ ನನಗೆ ದೂರುಗಳು ಬರುತ್ತಿವೆ. ವಿದ್ಯಾರ್ಥಿಗಳ ಆನ್‍ಲೈನ್ ಕಲಿಕೆಗೆಂದು ಕರ್ನಾಟಕ ಎಲ್ ಎಂಎಸ್ ಎಂಬ ಆಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ಪರಿಣಿತರುಗಳಿಂದ ಸಿದ್ಧಪಡಿಸಿ ಉತ್ತಮ ಗುಣ ಮಟ್ಟದ ಬೋಧನೆಯನ್ನು ಅಳವಡಿಸುವ ಬದಲು, ಈಗ ಇರುವ ಬೋಧಕರುಗಳಿಂದಲೆ ಮೊಬೈಲುಗಳ ಮೂಲಕವೇ ಸಿದ್ಧಪಡಿಸಿ ಅದರಲ್ಲಿ ತುಂಬಿಸಲಾಗಿದೆ.
ಬೆಳಕು, ಧ್ವನಿ ಮುಂತಾದವುಗಳು ಅತ್ಯಂತ ಕಳಪೆಯಾಗಿ ವಿದ್ಯಾರ್ಥಿಗಳು ಆ ಆನ್‍ಲೈನ್ ಬೋಧನೆಯ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ಆದರೆ ಸರ್ಕಾರ ಎಂಥಹ ಕನಿಷ್ಠ ಮಟ್ಟಕ್ಕೆ ಇಳಿದಿದೆಯೆಂದರೆ ಅಧ್ಯಾಪಕರುಗಳು ತರಗತಿಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ 10 ನಿಮಿಷ ಅವಕಾಶ ಕೊಟ್ಟು ನಿಮ್ಮ ಮೊಬೈಲುಗಳಲ್ಲಿ ಲಾಗಿನ್ ಆಗಿ ನಂತರ ಲಾಗ್ ಔಟ್ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆಂದು ದೂರುಗಳಿವೆ.
ಹಾಗೆ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಪ್ರಾಂಶುಪಾಲರುಗಳಿಗೆ ನಿರ್ದೇಶನಗಳನ್ನು ನೀಡುತ್ತಿದ್ದಾರೆ ಎಂದು ಅನೇಕ ಉಪನ್ಯಾಸಕರು ನನಗೆ ತಿಳಿಸಿದ್ದಾರೆ. ಆ ಎಲ್ ಎಂ ಎಸ್ ಆಪ್ ಗೆಂದು ಎಷ್ಟು ಹಣ ವಿನಿಯೋಗಿಸಲಾಗುತ್ತಿದೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕು. ಜಗತ್ತಿನ ಅನೇಕ ದೇಶಗಳು ವಿದ್ಯಾರ್ಥಿಗಳನ್ನು ಈ ಮೊಬೈಲುಗಳಿಂದ ದೂರ ಕರೆತರುವುದು ಹೇಗೆ ಎಂದು ಸಂಶೋಧನೆಗಳನ್ನು ನಡೆಸುತ್ತಿವೆ. ನಮ್ಮಲ್ಲಿ ಇನ್ನಷ್ಟು ಮೊಬೈಲ್‍ಗಳಿಗೆ ಅಂಟಿ ಕೂರುವಂತೆ ಸರ್ಕಾರವೇ ಮಾಡುತ್ತಿದೆ. ಉನ್ನತ ಶಿಕ್ಷಣ ಇಲಾಖೆಯು ಈ ರೀತಿಯ ಅನೇಕ ಅರಾಜಕತೆ ವ್ಯವಸ್ಥೆಗಳನ್ನು ಸೃಷ್ಟಿಸುವುದರ ಜೊತೆಗೆ ವರ್ಗಾವಣೆಯನ್ನು ಚಟ ಮಾಡಿಕೊಂಡಿದೆ. ಆದ್ದರಿಂದ ವರ್ಗಾವಣೆ ಮಾಡಲು ನೀಡಿರುವ ಪ್ರಕಟಣೆಯನ್ನು ಕೂಡಲೆ ಹಿಂಪಡೆದು, ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ನಿಗಧಿತ ಅವಧಿಯಲ್ಲಿ ವರ್ಗಾವಣೆ ಮಾಡುವಂತೆ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
Key words: Former CM- Siddhiramaiah- demands -suspension – interim -transfer – assistant professors.