ಬೆಂಗಳೂರು,ಆ,20,2019(www.justkannada.in): ಇಂದು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆಯಾಗಿದ್ದು ಈ ಬೆನ್ನಲ್ಲೆ ಸಚಿವ ಸಂಪುಟ ಸಭೆ ನಡೆದಿದೆ.
17 ಮಂದಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಬಳಿಕ ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮೊದಲ ಸಚಿವಸಂಪುಟ ಸಭೆ ನಡೆಯಿತು. ಸಭೆಯಲ್ಲಿ ನೆರೆ, ಪ್ರವಾಹ ಪೀಡಿತ ಜಿಲ್ಲೆಗಳಿಗೆ ನಾಳೆ, ನಾಡಿದ್ದು ಸಚಿವರು ಭೇಟಿ ನೀಡಿ ಮಾಹಿತಿ ಕಲೆಹಾಕಲು ತೀರ್ಮಾನಿಸಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಸಚಿವ ಜೆ. ಸಿ ಮಾಧುಸ್ವಾಮಿ, ನೆರೆ ಮತ್ತು ಬರ ನಿರ್ವಹಣೆಗೆ ಉಸ್ತುವಾರಿಗಳನ್ನ ನೇಮಕ ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ನೆರೆ ಮತ್ತು ಬರದ ಬಗ್ಗೆ ಮಾತ್ರ ಚರ್ಚೆ ನಡೆಸಲಾಗಿದೆ. ಇಂದಿನ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದರು.
ಪ್ರವಾಹದಿಂದ ಮನೆ ಕಳೆದುಕೊಂಡಿರುವ ನೆರೆ ಸಂತ್ರಸ್ತರಿಗೆ ಪ್ರತಿ ತಿಂಗಳು 10 ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ. ನಾಳೆ ನಾಡಿದ್ದು ಎರಡು ದಿನಗಳ ಕಾಲ ನೂತನ ಸಚಿವರು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ನೆರೆ, ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಲಿದ್ದಾರೆ. ಈ ಮೂಲಕ ನೆರೆ, ಪ್ರವಾಹದ ಅಧ್ಯಯನ ನಡೆಸಿ, ಮಾಹಿತಿಯನ್ನು ಕಲೆ ಹಾಕಲಿದ್ದಾರೆ ಎಂದು ತಿಳಿಸಿದರು.
Key words: Decision – Cabinet- meeting – visit –neighboring- areas-minister- jc maduswamy