ಮೈಸೂರು,ಆ,21,2019(www.justkannada.in) ನಾಟಕ, ಕಿರುಚಿತ್ರಗಳಲ್ಲಿ ಅಭಿನಯಿಸುವ ಮೂಲಕ ತನ್ನ ಪ್ರತಿಭೆ ಪ್ರದರ್ಶಿಸುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಬಹುಮುಖ ಬಾಲ ಪ್ರತಿಭೆ ಶ್ರೇಷ್ಠ ಎಸ್.ಜುಪ್ತಿಮಠ ಈಗ ಹಿರಿತೆರೆ ಪ್ರವೇಶಕ್ಕೂ ಅಣಿಯಾಗಿದ್ದಾನೆ.
ಒಂಬತ್ತನೇ ವಯಸ್ಸಿನಿಂದ ನಾಟಕದಲ್ಲಿ ಅಭಿನಯ ಆರಂಭಿಸಿದ ಈತ ಈವರೆಗೆ 20ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾನೆ. ಸೂನಗಹಳ್ಳಿ ರಾಜು ನಿರ್ದೇಶನದ ‘ಆನೆಬಲ’ ಚಲನಚಿತ್ರದ ಮೂಲಕ ಹಿರಿತೆರೆಗೆ ಲಗ್ಗೆ ಇಡುತ್ತಿದ್ದಾನೆ. ಇನ್ನೂ ನಾಲ್ಕು ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಚಿತ್ರೀಕರಣ ನಡೆಯುತ್ತಿವೆ.
ಹೆಜ್ಜೆಗೆಜ್ಜೆ ಉದಯ್ ಕುಮಾರ್ ಅವರ ನಿರ್ದೇಶನದ ಕಿಂದರಜೋಗಿ ನಾಟಕದ ಮೂಲಕ ರಂಗಭೂಮಿಗೆ ಕಾಲಿಟ್ಟ ಈತ ಪ್ರಸ್ತುತ ಹಿರಿಯ ರಂಗಕರ್ಮಿ ಮಂಡ್ಯ ರಮೇಶ್ ಅವರ ನಟನಾ ರಂಗಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಮಂಡ್ಯ ರಮೇಶ್ ಅವರ ಗರಡಿಯಲ್ಲಿ ಪಳಗಿ, ಅವರ ನಿರ್ದೇಶನದ ರಾಮ ರಹೀಮ, ನಾಯಿತಿಪ್ಪ, ಅಜ್ಜಿಕತೆ, ರತ್ನಪಕ್ಷಿ ಮುಂತಾದ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಕಿರುತೆರೆ, ರಂಗಭೂಮಿ ಕಲಾವಿದ ವಿಕ್ರಮ್ ನಿರ್ದೇಶನದ ‘ಮೇರಾ ಭಾರತ್ ಮಹಾನ್’ ಕಿರುಚಿತ್ರದಲ್ಲಿ ಅಭಿನಯಿಸಿದ್ದಾನೆ. ಇದೇ ಆ. 15ರಂದು ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಕಿರುತೆರೆ ಕಲಾವಿದ ಸೌರಭ ಕುಲಕರ್ಣಿ ನಿರ್ದೇಶನದ ‘ಮುಮುಕ್ಷು’ ಕಿರುಚಿತ್ರದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾನೆ. ಈ ಚಿತ್ರದ ಮರುಪ್ರದರ್ಶನ ಆ. 25ರಂದು ನಡೆಯಲಿದೆ.
ಜಿ ಟಿವಿ ಕನ್ನಡದಲ್ಲಿ ಪ್ರಸಾರಗೊಳ್ಳುತ್ತಿರುವ ಮಹೇಶ್ ಸುಖಧರೆ ಅವರ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿ ಕೂಡ ಪಾತ್ರಧಾರಿಯಾಗಿ ಗಮನ ಸೆಳೆದ. ನಟನೆ ಜತೆ ಯೋಗ, ಕರಾಟೆ ಕೂಡ ಈತನ ಆಸಕ್ತಿ ಕ್ಷೇತ್ರ. 5ನೇ ವರ್ಷದಿಂದಲೇ ಯೋಗ ಕಲಿಕೆ ಆರಂಭಿಸಿದ ಶ್ರೇಷ್ಠ, ಇತ್ತೀಚೆಗೆ ರುದ್ರೇಶ್ ಅವರ ಬಳಿ ಅಡ್ವಾನ್ಸ್ ಯೋಗ ಕಲಿತಿದ್ದಾನೆ. ಇವನು ಪ್ರದರ್ಶಿಸುವ ಯೋಗಾಸನಗಳ ಚಿತ್ರಗಳು ಅಂತಾರಾಷ್ಟ್ರೀಯ ಗುಣಮಟ್ಟದ ಯೋಗ ಪುಸ್ತಕವೊಂದಕ್ಕೆ ಬಳಕೆಯಾಗುತ್ತಿದ್ದು, ಇತ್ತೀಚೆಗಷ್ಟೇ ಇದರ ಫೋಟೋಶೂಟ್ ಮೈಸೂರಿನಲ್ಲಿ ನಡೆದಿದೆ. ಎಂಟನೇ ವಯಸ್ಸಿನಲ್ಲಿ ಸೆನ್ಸಾಯಿ ಜಾನ್ಸನ್ ಅವರ ಬಳಿ ಕರಾಟೆ ಕಲಿಕೆ ಆರಂಭಿಸಿ, ಹನ್ನೊಂದನೇ ವಯಸ್ಸಿನಲ್ಲಿ
ಬ್ಲ್ಯಾಕ್ ಬೆಲ್ಟ್ ಪಡೆದ. ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಕ್ಕೆ ಭಾಜನನಾಗಿದ್ದಾನೆ. ಪಾಶ್ಚಾತ್ಯ ನೃತ್ಯವನ್ನೂ ಮಾಡುವ ಈತ ವೀರ ದಸರೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾನೆ.
ಈಜು ಬಾರದಿದ್ದರೂ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು ಈತನಿಗೆ ಜಲಯೋಗದ ತರಬೇತಿ ನೀಡಿದರು. ಪರಿಣಾಮ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಮಂಡ್ಯದಲ್ಲಿ ನಡೆದ ಕಾರ‌್ಯಕ್ರಮದಲ್ಲಿ ಶ್ರೀಗಳೊಂದಿಗೆ ಜಲಯೋಗ ಪ್ರದರ್ಶಿಸಿ ಗಮನ ಸೆಳೆದ.
ಮೈಸೂರಿನ ಎಸ್‌ಜೆಸಿಇ ಆವರಣದ ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾನೆ. ಬೀದಿನಾಟಕ, ಭಾವಗೀತೆ, ಭಕ್ತಿ ಗೀತೆ, ರಂಗಗೀತೆಗಳ ಗಾಯನ, ಕವನ ವಾಚನವನ್ನೂ ಮಾಡುವ ಬಹುಮುಖ ಪ್ರತಿಭೆ ಶ್ರೇಷ್ಠನನ್ನು ಹಾರೈಸಲು(9036187515).