ಮೈಸೂರು,ಆ,21,2019(www.justkannada.in): ಬಿಎಸ್ ಯಡಿಯೂರಪ್ಪ ಸಿಎಂ ಆದ 20 ದಿನಗಳ ಬಳಿಕ ಬಿಜೆಪಿ ಸರ್ಕಾರದ ನೂತನ ಸಚಿವ ಸಂಪುಟ ಅಂತೂ ಇಂತೂ ವಿಸ್ತರಣೆಯಾಗಿದೆ. ಈ ಮಧ್ಯೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಲವು ಶಾಸಕರು ಮಂತ್ರಿಗಿರಿ ಕೈ ತಪ್ಪಿದ್ದಕ್ಕೆ ಅಸಮಾಧಾನ ಹೊರಹಾಕಿದ್ದು ಅವರನ್ನ ಸಮಾಧಾನ ಪಡಿಸುವತ್ತ ಸಿಎಂ ಚಿತ್ತವಿದೆ. ಇವೆಲ್ಲದರ ಮಧ್ಯೆ ಸಂಪುಟ ವಿಸ್ತರಣೆಯಾದರೂ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಕಾರ್ಯಗಳು ಮಾತ್ರ ವೇಗ ಪಡೆದುಕೊಂಡಿಲ್ಲ.
ಹೌದು, ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಾಳೆ ಗಜಪಯಣಕ್ಕೆ ಚಾಲನೆ ಸಿಗಲಿದ್ದು ಮೊದಲ ಹಂತದ ಗಜಪಡೆ ಆಗಮಿಸಲಿದೆ. ಆದರೆ ಸರ್ಕಾರ ದಸರಾ ಆಚರಣೆಗೆ ಗ್ರೀನ್ ಸಿಗ್ನೆಲ್ ನೀಡಿದ್ರೂ ಯಾವೊಂದು ಕೆಲಸಗಳು ಸಾಗುತ್ತಿಲ್ಲ. ಗಜಪಯಣ ಆರಂಭಕ್ಕೆ ಕ್ಷಣಗಣನೆ ಇದ್ದರೂ ಇತ್ತ ಇನ್ನೂ ದಸರಾ ಉಪಸಮಿತಿ ರಚನೆಯಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ದಸರಾ ಉಪಸಮಿತಿಯ ಪ್ರಮುಖರಾಗಬೇಕಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೇ ಆಗಿಲ್ಲ.
ನಾಳೆ ಗಜಪಡೆ ಆಗಮಿಸುತ್ತಿದ್ದರೆ ಇತ್ತ ಇನ್ನೂ ಆಹ್ವಾನ ಪತ್ರಿಕೆ ಸಿದ್ಧಗೊಂಡಿಲ್ಲ. ಇನ್ನೂ ಯಾವುದೇ ಟೆಂಡರ್ ಕರೆದಿಲ್ಲ, ಯಾರನ್ನು ಆಹ್ವಾನ ಮಾಡಿಲ್ಲ. ಇವೆಲ್ಲಾ ಕಾರ್ಯಗಳು ನಿಧಾನವಾಗಲು ಕಾರಣ ಜಿಲ್ಲಾ ಉಸ್ತುವಾರಿ ಸಚಿವರನ್ನ ಇನ್ನು ನೇಮಕ ಮಾಡದಿರುವುದು.
ಸಂಪುಟ ವಿಸ್ತರಣೆಯಾಗಿ ಕೇವಲ ಒಂದು ದಿನವಾಗಿದ್ದು, ಜಿಲ್ಲೆಗೆ ಉಸ್ತುವಾರಿ ಸಚಿವರನ್ನ ನೇಮಕ ಮಾಡದಿರುವುದಕ್ಕೆ ದಸರಾ ಸಿದ್ದತೆಗಳು ಸ್ಥಿರವಾಗಿವೆ. ಹೀಗಾಗಿ ಇಂದಾದರೂ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನ ಬಿಜೆಪಿ ಸರ್ಕಾರ ನೇಮಕ ಮಾಡಲಿದೆಯೇ ಕಾದು ನೋಡಬೇಕು.
Key words: Expansion – Cabinet-Mysore- Dasara –Festivals- Slow