ಮೈಸೂರು,ಜನವರಿ,11,2023(www.justkannada.in): ಸ್ವಚ್ಛ ಭಾರತ್ ಅಭಿಯಾನದ ಸಂದರ್ಭದಲ್ಲಿ ಸ್ವಚ್ಛವಾಗಿ ಕಾಣಿಸಿಕೊಂಡರೂ ನಂತರದಲ್ಲಿ ಕಸಮಯವಾಗಿ ಸಾರ್ವಜನಿಕರು ಮೂಗುಮುಚ್ಚಿ ಓಡಾಡುತ್ತಿದ್ದ ಮೈಸೂರು ನಗರದ 65 ಸ್ಥಳಗಳು ಈಗ ಸಂಪೂರ್ಣ ಕಸಮುಕ್ತ ಪ್ರದೇಶವಾಗಿವೆ.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಅವರ ಕಸ ಮುಕ್ತ ನಗರ ಮಾಡುವ ಪ್ರಯತ್ನಕ್ಕೆ ಬೆನ್ನಲುಬಾಗಿ ನಿಂತ ಅಧಿಕಾರಿಗಳು ಕೈ ಜೋಡಿಸಿದ ಫಲವಾಗಿ ಮೊದಲ ಹಂತದಲ್ಲಿ 65 ಸ್ಥಳಗಳು ಕಸಮುಕ್ತ ಸ್ಥಳವಾಗಿದೆ.
ಮೇಯರ್ ಆಗಿ ಆಯ್ಕೆಯಾಗುತ್ತಿದ್ದಂತೆ ಶಿವಕುಮಾರ್ ಅವರು ರಸ್ತೆಯ ಬದಿಗಳಲ್ಲಿ ಬಿಸಾಡುವ ಕಸದ ಜಾಗವನ್ನು ಕಸ ಮುಕ್ತವನ್ನಾಗಿಸುವ ಬಗ್ಗೆ ಘೋಷಣೆ ಮಾಡುವ ಜತೆಗೆ ಅದಕ್ಕೆ ತಕ್ಕಂತೆ ಕಾರ್ಯಪ್ರವೃತ್ತರಾಗಿದ್ದರು. ಆರೋಗ್ಯ ಮತ್ತು ತಾಂತ್ರಿಕ ಶಾಖೆಯ ಅಧಿಕಾರಿಗಳ ಸಭೆಯನ್ನು ಕರೆದು ಸಾರ್ವಜನಿಕರು ಹಲವಾರು ಕಡೆಗಳಲ್ಲಿ ಕಸವನ್ನು ಬಿಸಾಡಿ ಕಸದ ರಾಶಿಯನ್ನಾಗಿ ಮಾಡುತ್ತಿದ್ದು,ಅದನ್ನು ತಡೆಗಟ್ಟಿ ಅಂತಹ ಜಾಗಗಳ ಸ್ವರೂಪವನ್ನು ಬದಲಿಸಿ ರಾಜ್ಯಕ್ಕೆ ಮಾದರಿಯಾಗುವಂತೆ ಯೋಜನೆ ರೂಪಿಸಿದ್ದರು. ಅದರಂತೆ, ಮೊದಲ ಹಂತದಲ್ಲಿ ಕಸ ಬಿಸಾಡಿ ಸಂಗ್ರಹವಾಗುತ್ತಿದ್ದ 65 ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜತೆಗೆ ಪ್ರದೇಶಗಳನ್ನು ರೂಪಾಂತರಗೊಳಿಸಿದ್ದಾರೆ.
ಮೊದಲ ಹಂತದಲ್ಲಿ65 ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಕಸಮುಕ್ತವನ್ನಾಗಿ ಮಾಡಲಾಗಿದೆ. ವಾಣಿವಿಲಾಸ ರಸ್ತೆ ಹತ್ತಿರದ ಸೀತಾರಾಮ ರಸ್ತೆ, ಅಗ್ರಹಾರ ವೃತ್ತದ ಟಾಂಗಾ ನಿಲ್ದಾಣ, ಹರಿಹರ ಹೋಟೆಲ್ ಹತ್ತಿರ, ಟ್ಯಾಂಕ್ ಬಂಡ್ ರಸ್ತೆ, ಕುರುಬಾರಹಳ್ಳಿ ಸ್ಮಶಾನದ ಮುಂಭಾಗ, ಕೃಷ್ಣರಾಜ ಸರ್ಕಾರಿ ಶಾಲೆಯ ಮುಂಭಾಗ, ದಿವಾನ್ಸ್ ರಸ್ತೆ, ಹೊಸಕೇರಿ 1ನೇ ಕ್ರಾಸ್, ಗೌರಿಶಂಕರ ಮುಖ್ಯರಸ್ತೆ, ಕಂಸಾಳೆ ಮಹದೇವಯ್ಯ ವೃತ್ತದ ಸಾರ್ವಜನಿಕ ಶೌಚಾಲಯ ಹಿಂಭಾಗ, ಶ್ಯಾಂ ಸ್ಟುಡಿಯೋ ಸಮೀಪ, ಅಶೋಕಪುರಂ ಅಂಗನವಾಡಿ ಎದುರು, ವಿವಿ ಮೊಹಲ್ಲಾದ ಎರಡನೇ ಮೇನ್ ವೈಟ್ ಹೌಸ್ ಹತ್ತಿರ, ಜಯಲಕ್ಷ್ಮೀಪುರಂ ಚಿನ್ಮಯ ಶಾಲೆ ಬಳಿ, ಕುಕ್ಕರಹಳ್ಳಿ ಕೆರೆ ಪಾರ್ಕ್ ಹತ್ತಿರ, ನಾರಾಯಣಸ್ವಾಮಿ ಬ್ಲಾಕ್, ಲಕ್ಷ್ಮೀಕಾಂತನಗರ ಸಮುದಾಯ ಭವನ ಮುಂಭಾಗ, ಮುಡಾ ಮಾರುಕಟ್ಟೆ ಮುಂಭಾಗ, ವಿಜಯನಗರ ಎರಡನೇ ಹಂತದ ಹೊಯ್ಸಳ ಸರ್ಕಲ್, ವಿಜಯನಗರ ಎರಡನೇ ಹಂತದ 19ನೇ ಮುಖ್ಯರಸ್ತೆ, ಮಥುರ ಪಾರ್ಕ್ ಮುಂಭಾಗ, ಸೆಂಟ್ ಥಾಮಸ್ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು, ಜೆ.ಪಿ.ನಗರ ಆಟದ ಮೈದಾನ, ಮಾನಂದವಾಡಿ ರಸ್ತೆ, ತರಳಬಾಳು ಶಾಲೆ ಹಿಂಭಾಗ, ಯಾದವಗಿರಿ ರೈಲ್ವೆ ಟ್ರಾಕ್ ಹತ್ತಿರ, ಯಾದವಗಿರಿ ಪರಮಹಂಸರಸ್ತೆ, ಶಾರದಾದೇವಿನಗರ ಹೈಟೆನ್ಷನ ಪಾರ್ಕ್ ಹತ್ತಿರ, ಗೋಕುಲಂ ಹಸು-ಕರು ಪಾರ್ಕ್ ಸೇರಿ ಇನ್ನಿತರ ಕಡೆಗಳಲ್ಲಿ ಕಸಮುಕ್ತಮಾಡಲಾಗಿದ್ದು ಸ್ವಚ್ಛವಾಗಿ ಕಾಣಿಸುತ್ತಿವೆ.
ಈ ಕುರಿತು ಮಾತನಾಡಿರುವ ಮೇಯರ್ ಶಿವಕುಮಾರ್, ನಗರದಲ್ಲಿ ಮೊದಲ ಹಂತದಲ್ಲಿ 65 ಸ್ಥಳಗಳನ್ನು ಕಸಮುಕ್ತ ಪ್ರದೇಶವನ್ನಾಗಿ ಮಾಡಲಾಗಿದ್ದು,ಹಂತ ಹಂತವಾಗಿ ಜನನಿಬಿಡ ಪ್ರದೇಶಗಳಲ್ಲಿ ಕಸ ಸುರಿಯುವ ಸ್ಥಳಗಳನ್ನು ಗುರುತಿಸಿ ರೂಪಾಂತರ ಮಾಡಲಾಗುವುದು. ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ.ಕಸ ಮುಕ್ತ ಪ್ರದೇಶಗಳಲ್ಲಿ ಈಗ ಸಾರ್ವಜನಿಕರು ನಿಗಾ ಇಟ್ಟು ಮತ್ತೆ ಕಸ ಸುರಿಯದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
Key words: Garbage –free-city-Mysore- Mayor- Shivakumar