ಮೈಸೂರು,ಜನವರಿ,20,2023(www.justkannada.in): ಸಮಾಜವಾದಿ ಚಿಂತಕ ಪ.ಮಲ್ಲೇಶ್ ನಿಧನ ವಾರ್ತೆ ಕೇಳಿ ಮೈಸೂರಿನತ್ತ ದೌಡಾಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಪ.ಮಲ್ಲೇಶ್ ಅವರ ಅಂತಿಮ ದರ್ಶನ ಪಡೆದು ಭಾವುಕರಾದ ಘಟನೆ ನಡೆಯಿತು.
ಬಹುದಿನಗಳ ಒಡನಾಡಿ, ಸಮಾನ ಮನಸ್ಕ ಪ.ಮಲ್ಲೇಶ್ ನಿಧನಕ್ಕೆ ಸಿದ್ಧರಾಮಯ್ಯ ಕಂಬನಿ ಮಿಡಿದಿದ್ದು, ಸಿದ್ಧರಾಮಯ್ಯ ಆಗಮಿಸುತ್ತಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೈಸೂರಿನಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶಕ್ಕೆ ಭಾಗಿಯಾಗುವುದಕ್ಕೂ ಮೊದಲು ಸಿದ್ಧರಾಮಯ್ಯ ಅಂತಿಮ ದರ್ಶನ ಪಡೆದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ, ಪ.ಮಲ್ಲೇಶ್ ನಿಧನ ಸುದ್ದಿ ಕೇಳಿ ಬಹಳ ನೋವುಂಟಾಯಿತು. ಇತ್ತೀಚೆಗೆ ನನ್ನ ಅವರ ಭೇಟಿ ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಗಿತ್ತು . ಅದೇ ಕೊನೆಯಾಯಿತು. ನಾನು ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದಾಗ ಅವರ ಪರಿಚಯವಾಯಿತು. ಅವರೊಬ್ಬ ಅಪ್ರತಿಮ ಹೋರಾಟಗಾರ. ಅವರೊಬ್ಬ ನನ್ನ ರಾಜಕೀಯ ಜೀವನದಲ್ಲಿ ಸಲಹೆಗಾರರಂತಿದ್ದರು. ನನ್ನ ರಾಜಕೀಯ ಜೀವನದ ಪ್ರತಿ ಹಂತದಲ್ಲೂ ಅವರು ನನಗೆ ಸಲಹೆ ಕೊಡುತ್ತಿದ್ದರು. ಅವರೊಬ್ಬ ನನ್ನ ಹಿತೈಷಿ. ಅವರನ್ನು ಕಳೆದುಕೊಂಡು ನನಗೆ ತುಂಬಾ ನೋವಾಗಿದೆ. ಇಷ್ಟು ಬೇಗ ಸಾಯುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದರು.
ನಾಡು, ನುಡಿ ಜಲ, ಭಾಷೆ, ದೀನ ದಲಿತರ ಹೋರಾಟದಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದರು. ನಾನು ಎರಡನೇ ಚುನಾವಣೆಯಲ್ಲಿ ನಿಂತಾಗ ನನಗೆ ಜನರಿಂದಲೇ ಹಣ ಸಂಗ್ರಹಿಸಿ ಚುನಾವಣೆಗೆ ಖರ್ಚು ಮಾಡಿದ್ದರು. ಮಿಕ್ಕ ಹಣದಲ್ಲಿ ನನಗೊಂದು ಸೈಟು ಖರೀದಿಸಿ ಮನೆಯನ್ನೂ ಕಟ್ಟಿಸಿಕೊಟ್ಟಿದ್ದರು. ಇದನ್ನ ನಾನು ಎಂದು ಮರೆಯುವುದಿಲ್ಲ. ನನ್ನ ಪ್ರತಿಯೊಂದು ಹಂತದಲ್ಲೂ ನನಗೆ ಸಲಹೆಯ ಸೂಚನೆ ಕೊಡುತಿದ್ದರು ಎಂದು ಹೇಳುವ ಮೂಲಕ ತಮ್ಮ ಮತ್ತು ಪ.ಮಲ್ಲೇಶ್ ನಡುವಿನ ಒಡನಾಟವನ್ನ ನೆನಪಿಸಿಕೊಂಡರು.
ಅಂತಿಮ ದರ್ಶನ ಪಡೆದು ನೋವು ತೋಡಿಕೊಂಡ ಪ್ರಗತಿಪರ ಚಿಂತಕ ಉಗ್ರ ನರಸಿಂಹಗೌಡ ಮತ್ತು ಸ.ರ ಸುದರ್ಶನ
ಪ ಮಲ್ಲೇಶ್ ಅವರ ಅಭಿಮಾನಿ ವರ್ಗ ರಾಮಕೃಷ್ಣ ನಗರದಲ್ಲಿರುವ ಅವರ ನಿವಾಸದ ಬಳಿ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಪ.ಮಲ್ಲೇಶ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಗತಿ ಪರ ಚಿಂತಕ ಉಗ್ರ ನರಸಿಂಹ ಗೌಡ, ಸಮಕಾಲೀನರಾದ ಸ.ರ ಸುದರ್ಶನ್ ಇತರರು ಕಂಬನಿ ಮಿಡಿದಿದ್ದಾರೆ.
ಪ.ಮಲ್ಲೇಶ್ ಒಬ್ಬ ಅಪ್ಪಟ ಹೋರಾಟಗಾರ. ತಮ್ಮ ಆರು ದಶಕಗಳ ಹೋರಾಟದ ಬದುಕಿನಲ್ಲಿ ಯಾವತ್ತು ತಮ್ಮ ತತ್ವ ಸಿದ್ದಾಂತಗಳೊಂದಿಗೆ ರಾಜಿ ಮಾಡಿಕೊಂಡವರೇ ಅಲ್ಲ. ಅವರ ಅಗಲಿಗೆ ರಾಜ್ಯಕ್ಕೆ ದೊಡ್ಡ ನಷ್ಟ. ವಯೋಸಹಜವಾಗಿ ಸಾವನ್ನಪ್ಪಿದ್ದಾರೆ. ಎಲ್ಲರೂ ಒಂದಲ್ಲ ಒಂದು ದಿನ ಹೋಗಲೇ ಬೇಕು ಏನೂ ಮಾಡೋದು. ರಾಜ್ಯದ ನಾಡು, ನುಡಿ, ದೀನ ದಲಿತ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ 6 ದಶಕಗಳಿಂದಲೂ ಹೋರಾಟ ಮಾಡಿಕೊಂಡ ಬಂದಿದ್ದರು. ಮೈಸೂರಿಗೆ ಇದು ಒಂದು ದೊಡ್ಡ ನಷ್ಟವಾಗಿದೆ ಎಂದು ಪ್ರಗತಿಪರ ಚಿಂತಕ ಉಗ್ರ ನರಸಿಂಹ ಗೌಡ ನುಡಿದರು.
ಇತ್ತ ಅವರ ಜೀವನದ ಗೆಳೆಯ,ಒಡನಾಡಿ ಸ.ರ ಸುದರ್ಶನ ಮಾತನಾಡಿ, ಮಲ್ಲೇಶ್ ಅವರು ನಮ್ಮ ತಂದೆ ಅವರಿಂದ ನನಗೆ ಪರಿಚಯವಾದ ಗೆಳೆಯ. ನನ್ನ ಅವರ ನಡುವೆ ಸುಮಾರು 40 ವರ್ಷಗಳ ಹಳೆಯ ಗೆಳೆತನ. ನನ್ನ ಜೀವದ ಗೆಳೆಯನನ್ನ ಕಳೆದುಕೊಂಡ ನನ್ನ ಜೀವ ಬಲ ಕುಸಿದುಹೋಗಿದೆ. ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದ ಪ.ಮಲ್ಲೇಶ್ ಅವರ ನಿಧನದಿಂದ ನನಗೆ ತುಂಬಾ ನೋವುಂಟಾಗಿದೆ ಎಂದು ಕಂಬನಿ ಮಿಡಿದರು.
Key words: Siddaramaiah -became –emotional- -last darshan -socialist thinker- Pa. Mallesh.