145 ಡಯಾಲಿಸಿಸ್ ಕೇಂದ್ರಗಳಲಿಲ್ಲ ವೃತ್ತಿಪರ ಮೂತ್ರರೋಗ ತಜ್ಞರು: ರೋಗಿಗಳ ಜೀವದ ಜತೆ ಚೆಲ್ಲಾಟ ಎಷ್ಟು ಸರಿ..? ಜೆಡಿಎಸ್ ಕಿಡಿ.

ಬೆಂಗಳೂರು,ಜನವರಿ,20,2023(www.justkannada.in):  ರಾಜ್ಯದ 167 ಡಯಾಲಿಸಿಸ್ ಕೇಂದ್ರಗಳಲ್ಲಿ 145 ಕೇಂದ್ರಗಳು ವೃತ್ತಿಪರ ಮೂತ್ರರೋಗ ತಜ್ಞರಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಆಘಾತಕಾರಿ ಸುದ್ದಿ ವರದಿಯಾಗಿದೆ. ಆರೋಗ್ಯ ಸಚಿವ  ಸುಧಾಕರ್ ಅವರೆ, ಇಂತಹ ಆತಂಕಕಾರಿ ಸುದ್ದಿ ತಮಗಿನ್ನೂ ತಲುಪಿಲ್ಲವೆ? ಕಿಡ್ನಿ ಸಮಸ್ಯೆ ಇರುವ ಲಕ್ಷಾಂತರ ರೋಗಿಗಳ ಜೀವದ ಜತೆ ಚೆಲ್ಲಾಟ ಆಡುವುದು ಎಷ್ಟು ಸರಿ? ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್ ಘಟಕ,  ತಜ್ಞರ ಲಿಖಿತ ಸೂಚನೆ, ಸಲಹೆ ಇಲ್ಲದೆ ಬಹುತೇಕ ಡಯಾಲಿಸಿಸ್ ಕೇಂದ್ರಗಳು ಕೆಲಸ ಮಾಡುತ್ತಿವೆ. ಉತ್ಸವ ನಡೆಸುವುದು, ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲೇ ಕಾಲಕಳೆಯುವುದು ಆಡಳಿತ ಮಾಡುವವರ ಲಕ್ಷಣವಲ್ಲ, ಸಚಿವ ಸುಧಾಕರ್ ಅವರೆ. ಮನರಂಜನೆ ಮಾತ್ರ ಬೇಕಿದ್ದರೆ ಯಾಕೆ ಆರೋಗ್ಯ ಇಲಾಖೆಯ ಸಚಿವನಾದ್ರಿ? ಎಂದು ಪ್ರಶ್ನಿಸಿದೆ.

ಇಷ್ಟು ಸದರವಾಗಿ ಆಡಳಿತ ನಡೆಸುತ್ತೀರಲ್ಲ, ಜೀವಗಳ ಬೆಲೆಯ ಅರಿವಿದೆಯೇ? ಬಣ್ಣಬಣ್ಣದ ಪ್ರಚಾರದ ಮಾತುಗಳಿಂದ ಚಪ್ಪಾಳೆ ಗಿಟ್ಟಿಸಬಹುದು. ಆದರೆ, ಅದರಿಂದ ಜನಸೇವೆಯಾಗುವುದಿಲ್ಲ. ಇಲಾಖೆಯ ಆಗು-ಹೋಗುಗಳ ಬಗ್ಗೆ ಪರಿಜ್ಞಾನವಿಲ್ಲದಿದ್ದರೆ, ನಿಮ್ಮಂತಹ ಆರೋಗ್ಯ ಸಚಿವ ಯಾಕೆ ಬೇಕು? ಇಷ್ಟು ಬೇಜವಾಬ್ದಾರಿ ನಡೆಯು ಹೇಸಿಗೆ ತರಿಸುತ್ತಿದೆ.

ರಾಜ್ಯ ಬಿಜೆಪಿ ಸರ್ಕಾರ ಲಂಗು-ಲಗಾಮಿಲ್ಲದೆ ಸಾಗುತ್ತಿರುವುದಕ್ಕೆ ಈ ಸುದ್ದಿಯೇ ಸಾಕ್ಷಿ. ರೋಗಿಗಳ ಆರೋಗ್ಯ ಸಮಸ್ಯೆಯನ್ನು ಇಷ್ಟು ಲಘುವಾಗಿ ಪರಿಗಣಿಸುವುದು ರಾಕ್ಷಸಿ ಮನಸ್ಥಿತಿ. ಕನ್ನಡಿಗರ ರಕ್ತ ಹೀರಿ, ಹೊಟ್ಟೆ ತುಂಬಿಸಿಕೊಳ್ಳುವ ಜಿಗಣೆಗಳ ದಂಡಾಗಿದೆ ಈ ಸರ್ಕಾರ. ನಿಮಗೆ ಜನತೆಯ ಶಾಪ ತಟ್ಟದೇ ಬಿಡದು ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

Key words: 145 dialysis -centers -Professional –urologist-JDS -tweet