ಮೈಸೂರು,ಜನವರಿ,208,2023(www.justkannada.in): ಮಾಜಿ ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದಿಂದ ಟಿಕೆಟ್ ಪಡೆಯಲು ಪಟ್ಟು ಹಿಡಿದಿದ್ದು, ಆದರೆ ಎಚ್.ಡಿ.ಕುಮಾರಸ್ವಾಮಿ ಅವರು ಭವಾನಿ ರೇವಣ್ಣರಿಗೆ ಟಿಕೆಟ್ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಭವಾನಿ ರೇವಣ್ಣ ಅವರನ್ನ ಶಾಸಕ ಸಿಟಿ ರವಿ ಬಿಜೆಪಿಗೆ ಆಹ್ವಾನಿಸಿದ್ದ ನಂತರ ಇದೀಗ ಸಚಿವ ಅಶ್ವಥ್ ನಾರಾಯಣ್ ಸಹ ಪಕ್ಷಕ್ಕೆ ಭವಾನಿ ರೇವಣ್ಣರಿಗೆ ಆಹ್ವಾನ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ನಮ್ಮ ಪಕ್ಷದಲ್ಲಿ ಯಾರ ಮನೆಯನ್ನೂ ಕಾಯಬೇಕಿಲ್ಲ, ಯಾರ ಗೇಟನ್ನು ಕಾಯಬೇಕಿಲ್ಲ, ಬಿಜೆಪಿಯಲ್ಲಿ ಮುಕ್ತವಾಗಿ ಬೆಳೆಯುವ ಅವಕಾಶವಿದೆ. ಹೀಗಾಗಿ ಜೆಡಿಎಸ್ ನ ಭವಾನಿ ರೇವಣ್ಣ ಅವರು ಬಿಜೆಪಿಗೆ ಬಂದರೆ ಹೃದಯಪೂರ್ವಕ ಸ್ವಾಗತ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಪ್ರಧಾನಿ ಮೋದಿ ಅಮಿತ್ ಶಾ ಭೇಟಿ ಬಗ್ಗೆ ಲೇವಡಿ ಮಾಡಿದ ವಿಪಕ್ಷಗಳಿಗೆ ಟಾಂಗ್ ಕೊಟ್ಟ ಸಚಿವ ಅಶ್ವಥ್ ನಾರಾಯಣ್, ಕಾಂಗ್ರೆಸ್ನವರು ಖಾಲಿಯಾಗಿದ್ದಾರೆ, ಅವರಿಗೆ ಹೇಳಲು ಏನೂ ಇಲ್ಲ. ಅದಕ್ಕಾಗಿ ಸುಖಾಸುಮ್ಮನೇ ಮಾತನಾಡುತ್ತಿದ್ದಾರೆ ಎಂದರು.
ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಮನಗರ, ಮಂಡ್ಯ ಜಿಲ್ಲೆಯಲ್ಲಿ ವಿಪಕ್ಷಗಳ ಕ್ಯಾತೆ ಇದ್ದೇ ಇದೆ. ನಮ್ಮದು ಅಭಿವೃದ್ಧಿ ಪರ ಸರ್ಕಾರ, ಅದಕ್ಕೆ ಜನ ಬೆಂಬಲಿಸುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಜೆಡಿಎಸ್ಗೆ ಮತ ನೀಡಿದರೆ ಪ್ರಯೋಜನವಿಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು.
Key words: BJP – Bhavani Revanna- welcome-Minister -Aswath Narayan