ಮೈಸೂರು, ಫೆ.09, 2023(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸದ್ಯದಲ್ಲೇ 10 ವಿವಿಧ ಹೊಸ ಕೋರ್ಸ್ ಆರಂಭಿಸಲಿದೆ.
‘ ಜಸ್ಟ್ ಕನ್ನಡ ‘ ಜತೆ ಮಾತನಾಡಿದ KSOU ನೂತನ ಕುಲಪತಿ ಪ್ರೊ. ಶರಣಪ್ಪ ಹಲಸೆ ಅವರು ಈ ಬಗ್ಗೆ ಹೇಳಿದಿಷ್ಟು..
ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಹಾಗೂ ಪ್ರಸ್ತುತ ಬೇಡಿಕೆಯಲ್ಲಿರುವ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕ ರಾಜ್ಯ ಮುಕ್ತ ವಿವಿ ಹೊಸದಾಗಿ 10 ಕೋರ್ಸ್ ಗಳನ್ನು ಆರಂಭಿಸಲಿದೆ. MSW, BSW, M.Tourisum, Bio-infotech, BBA,Earth Science.. ಕೋರ್ಸ್ ಗಳನ್ನು ಸದ್ಯದಲ್ಲೇ ಆರಂಭಿಸಲು ಸಿದ್ಧತೆ ನಡೆಸಲಾಗಿದೆ . ಈ ಎಲ್ಲಾ ಕೋರ್ಸ್ ಗಳಿಗೂ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಶುಲ್ಕ ನಿಗಧಿ ಪಡಿಸಿರುವುದು ಮತ್ತೊಂದು ವಿಶೇಷ ಎಂದರು.
ಅರಿವಿಗೆ ಕ್ರಮ :
ಕರ್ನಾಟಕ ರಾಜ್ಯ ಮುಕ್ತ ವಿವಿಯ ಜನವರಿ ಆವೃತ್ತಿಯ ಪ್ರವೇಶಾತಿ ಈಗಾಗಲೇ ಆರಂಭಗೊಂಡಿದ್ದು ಮಾ. 31ರ ತನಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮುಕ್ತ ವಿವಿಯ ಧೇಯವಾಕ್ಯ ‘ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ’ ಎಂಬುದಕ್ಕೆ ಪೂರಕವಾಗಿ ಇದೀಗ ಕರ್ನಾಟಕ ಮುಕ್ತ ವಿವಿ ಸಿಬ್ಬಂದಿ, ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲೆಡೆ ಸಂಚಾರ ಆರಂಭಿಸಿದ್ದಾರೆ. ಮುಕ್ತ ವಿವಿಯ 23 ಪ್ರಾದೇಶಿಕ ಕೇಂದ್ರಗಳ ನಿರ್ದೇಶಕರು, ಕೇವಲ ಕಚೇರಿಯಲ್ಲಿ ಕುಳಿತ್ತಿದ್ದರೆ ಸಾಲದು, ತಮ್ಮ ವ್ಯಾಪ್ತಿಯ ತಾಲೊಕು, ಹೊಬಳಿ ಮಟ್ಟಕ್ಕೆ ತೆರಳಿ ಅಲ್ಲಿ ಮುಕ್ತವಿವಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ತಾಕೀತು ಮಾಡಲಾಗಿದೆ ಎಂದರು.
ಒಂದು ಲಕ್ಷ ಪ್ರವೇಶಾತಿ ಗುರಿ :
ಈ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಒಂದು ಲಕ್ಷಕ್ಕೆ ಮುಟ್ಟಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಪ್ರಚಾರ ಕಾರ್ಯಗಳನ್ನು ನಡೆಸಲಾಗುತ್ತಿದೆ. ಸಾಂಪ್ರದಾಯಿಕ ಪ್ರಚಾರ ಕಾರ್ಯದ ಜತೆಜತೆಗೆ ಜಾತ್ರಾ ಸ್ಥಳಗಳು, ಸಾರ್ವಜನಿಕ ಸಭೆ, ಸಮಾರಂಭ ನಡೆಯುವ ಸ್ಥಳಗಳಲ್ಲಿ ಮುಕ್ತ ವಿವಿಯ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮುಕ್ತ ವಿವಿ ಸಿಬ್ಬಂದಿಯೇ ಖುದ್ದು ನಿರ್ವಹಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳ ಪ್ರವೇಶದ ಮೇಲೆ ಪಾಸಿಟಿವ್ ಪರಿಣಾಮ ಬೀರಿದ್ದು, ಪ್ರವೇಶಾತಿ ಪ್ರಕಟಣೆ ನೀಡಿದ ಕೆಲ ದಿನಗಳಲ್ಲೇ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ವಿಶೇಷ ಎಂದು ಕುಲಪತಿ ಪ್ರೊ.ಶರಣಪ್ಪ ಹಲಸೆ ಸಂಸತ ವ್ಯಕ್ತಪಡಿಸಿದರು.
ಡಿಜಿಟಲ್ ಇವ್ಯಾಲುಯೇಷನ್ :
ಮುಕ್ತ ವಿವಿಯಲ್ಲಿ ಪರೀಕ್ಷೆ ಫಲಿತಾಂಶ ಪಾರದರ್ಶಕ ಹಾಗೂ ಕರಾರುವಕ್ಕಾಗಿರುವ ಸಲುವಾಗಿ ಡಿಜಿಟಲ್ ಇವ್ಯಾಲುಯೇಷನ್ ಪದ್ಧತಿ ಜಾರಿಗೆ ತರಲಾಗಿದೆ. ಜತೆಗೆ ಪರೀಕ್ಷೆ ಫಲಿತಾಂಶವನ್ನು ಆಯಾ ವಿದ್ಯಾರ್ಥಿಗಳ ವಾಟ್ಸ್ ಅಪ್ ಗೆ ಅಪ್ ಲೋಡ್ ಮಾಡಲಾಗುತ್ತದೆ. ಇದರಿಂದ ವಿದ್ಯಾರ್ಥಿ ತನ್ನ ಫಲಿತಾಂಶವನ್ನು ಮೊಬೈಲ್ ಮೂಲಕವೇ ಪಡೆಯಬುದಾಗಿದೆ ಎಂದರು.
ನ್ಯಾಕ್ ಮಾನ್ಯತೆ ವಿಶ್ವಾಸ :
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಂದಿರುವ ಬಹು ದೊಡ್ಡ ಸವಾಲು ಎಂದರೆ, ನ್ಯಾಕ್ ಮಾನ್ಯತೆ ಪಡೆಯುವುದು. ಯುಜಿಸಿಯ ಹಲವಾರು ಸವಲತ್ತು, ಅನುದಾನ ಪಡೆಯಬೇಕಾದಲ್ಲಿ ನ್ಯಾಕ್ ಮಾನ್ಯತೆ ಅತ್ಯಾವಶ್ಯಕ ಎಂದು ಕುಲಪತಿ ಪ್ರೊ.ಶರಣಪ್ಪ ಹಲಸೆ ಅಭಿಪ್ರಾಯಪಟ್ಟರು.
ಈಗಾಗಲೇ ಈ ನಿಟ್ಟಿನಲ್ಲಿ ಅಗತ್ಯ ದಾಖಲೆಗಳನ್ನು ಆನ್ ಲೈನ್ ಮೂಲಕ ಪೂರೈಸಲಾಗಿದೆ. ನಾನು ಈ ಹಿಂದೆ ನ್ಯಾಕ್ ಸಮಿತಿಯಲ್ಲಿ ಜವಾಬ್ದಾರಿ ನಿರ್ವಹಿಸಿದ ಅನುಭವದ ಆಧಾರದಲ್ಲಿ ಹೇಳುವುದಾದರೆ KSOU ಗೆ ನ್ಯಾಕ್ ಮಾನ್ಯತೆಗೆ ಅವಶ್ಯಕವಿರುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ. KSOU ವಿನಲ್ಲಿರುವಷ್ಟು ಉತ್ತಮ ಗುಣಮಟ್ಟದ ಮೂಲ ಸೌಕರ್ಯಗಳು ಬೇರೆ ಯಾವ ಕಡೆಯೂ ಇಲ್ಲ . ಜತೆಗೆ ಪರಿಣತಿ ಹೊಂದಿದ ಬೋಧಕ ಸಿಬ್ಬಂದಿ (150) ಹಾಗೂ ವಿದ್ಯಾರ್ಥಿಗಳ ಪ್ರವೇಶಾತಿಗೆ ಪೂರಕವಾದ ಬೋಧಕೇತರ ಸಿಬ್ಬಂದಿ (900) ವರ್ಗ ಮುಕ್ತವಿವಿಯಲ್ಲಿರುವುದು ನ್ಯಾಕ್ ಮಾನ್ಯತೆಗೆ ಪೂರಕವಾಗಿದೆ ಎಂದು ಪ್ರೊ. ಶರಣಪ್ಪ ಹಲಸೆ ವಿಶ್ವಾಸ ವ್ಯಕ್ತಪಡಿಸಿದರು.
ಆಲ್ ಲೈನ್ ಕೋರ್ಸ್ :
ನ್ಯಾಕ್ ಮಾನ್ಯತೆ ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿವಿ ಆನ್ ಲೈನ್ ಕೋರ್ಸ್ ಗಳನ್ನು ಆರಂಭಿಸಲಿದೆ. ಈಗಾಗಲೇ ಇದಕ್ಕೆ ಅಗತ್ಯ ಸಿದ್ಧತೆ ನಡೆದಿದ್ದು ಸದ್ಯದಲ್ಲೇ ಆನ್ ಲೈನ್ ಕೋರ್ಸ್ ಆರಂಭವಾಗಲಿದೆ ಎಂದು ಕುಲಪತಿ ಪ್ರೊ.ಶರಣಪ್ಪ ಹಲಸೆ ತಿಳಿಸಿದರು.
Key words : KSOU-karnataka-state-open-universiy-admission-10-new-courses-one-lakh-target-vc-halse