ಮೈಸೂರು,ಫೆಬ್ರವರಿ,13,2023(www.justkannada.in): ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಜೈನ್ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂಎಲ್ಸಿ ಎಚ್ ವಿಶ್ವನಾಥ್, ಇದು ದೇಶವೇ ತಲೆ ತಗ್ಗಿಸುವ ವಿಚಾರ. ಚಕ್ರವರ್ತಿ ಸೂಲಿಬೆಲೆ, ರೋಹಿತ್ ಚಕ್ರತೀರ್ಥ, ಪ್ರಮೋದ್ ಮುತಾಲಿಕ್ ಅವರು ಸರ್ಕಾರ ನಡೆಸುತ್ತಿದ್ದಾರೆ. ಸರ್ಕಾರ ಇದ್ದಿದ್ದರೆ ಜೈನ್ ಕಾಲೇಜು ವ್ಯವಸ್ಥಾಪಕ ಮಂಡಳಿ ಜೈಲಿನಲ್ಲಿ ಇರಬೇಕಿತ್ತು. ಇಷ್ಟೆಲ್ಲಾ ನಡೆಯುತ್ತಿದ್ದರೂ ಪ್ರಗತಿಪರ ಚಿಂತಕರು, ಅಂಬೇಡ್ಕರ್ ವಾದಿಗಳು ಬಾಯಿ ಬಿಡುತ್ತಿಲ್ಲ. ವಿಶ್ವ ಮಟ್ಟದಲ್ಲಿ ಭಾರತಕ್ಕೆ ಗೌರವ ಬಂದಿದ್ದರೆ ಅಂಬೇಡ್ಕರ್ ಸಂವಿಧಾನದಿಂದ. ರಾಮಾಯಣ, ಖುರಾನ್, ಬೈಬಲ್ ಗಿಂತಲೂ ಸಂವಿಧಾನ ಪವಿತ್ರವಾದದ್ದು. ಇದರ ಬಗ್ಗೆ ನಾಡಿನ ಎಂಪಿ, ಎಂಎಲ್ಎ ಹಾಗೂ ವಿಪಕ್ಷಗಳು ದನಿ ಎತ್ತುತ್ತಿಲ್ಲ. ನಿಜಕ್ಕೂ ಇದು ತಲೆ ತಗ್ಗಿಸುವ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತ ಮಾತೆ ಮಂದಿರ ಉದ್ಘಾಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್. ವಿಶ್ವನಾಥ್, ದೇಶದ ಜನರ ಮನಸ್ಸಿನಲ್ಲಿ ಭಾರತ ಮಾತೆ ಸದಾ ನೆಲೆಸಿದ್ದಾಳೆ. ಹೀಗಿದ್ದರೂ ಭಾರತ ಮಾತೆಯ ದೇವಸ್ಥಾನ ನಿರ್ಮಾಣ ಮಾಡುವುದಾಗಿ ಅಮಿತ್ ಶಾ ಹೇಳಿದ್ದಾರೆ. ದೇವರುಗಳೇ ಓಡಿ ಹೋಗುವ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಅಮಿತ್ ಶಾ ಅವರಿಂದ ದೇಶಾಭಿಮಾನದ ಪಾಠ ಹೇಳಿಸಿಕೊಳ್ಳಬೇಕಿಲ್ಲ. ಗಾಂಧೀ, ಅಂಬೇಡ್ಕರ್ ಯಾರಿಗೂ ಬೆಲೆ ಇಲ್ಲದಂತಾಗಿದೆ. ಸರ್ಕಾರ ಕೂಡ ಜೈನ್ ವಿವಿ ಅಫಿಲಿಯೇಷನ್ ಕಿತ್ತು ಹಾಕಬೇಕು, ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ಕನಸಾಗಿದೆ. ಉನ್ನತ ಶಿಕ್ಷಣ ಸಚಿವರಿಗೆ ಎನ್ ಇಪಿ ಬಗ್ಗೆ ಅರಿವೇ ಇಲ್ಲ, ಇದನ್ನ ಸರಿಯಾಗಿ ತಿಳಿದುಕೊಳ್ಳಿ. ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹಣವನ್ನೇ ನೀಡಿಲ್ಲ, ಎನ್ ಇಪಿ ಹೇಗೆ ಜಾರಿ ಮಾಡುತ್ತೀರಾ? ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನದ ಬಗ್ಗೆ ಸರ್ಕಾರ ಜನರಲ್ಲಿ ಕ್ಷಮೆ ಕೇಳಬೇಕು. ಜೈನ್ ವಿವಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಎಚ್ ವಿಶ್ವನಾಥ್ ಒತ್ತಾಯಿಸಿದರು.
Key words: Insult – Dr. BR Ambedkar- take action-against- Jain college-MLC- H. Vishwanath.