ಮೈಸೂರು,ಫೆಬ್ರವರಿ,18,2023(www.justkannada.in): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಮೂರುವರೆ ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ.ಸಾಲ ಮಾಡುವುದೇ ಬಿಜೆಪಿ ಸರ್ಕಾರದ ದೊಡ್ಡ ಸಾಧನೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ರಾಜ್ಯ ಬಜೆಟ್ ಕುರಿತು ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ ಲಕ್ಷಣ್, ನಿನ್ನೆ ಸಿಎಂ ಬೊಮ್ಮಾಯಿ ರಾಜ್ಯದ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಒಟ್ಟು ಗಾತ್ರ 3.9 ಲಕ್ಷ ಕೋಟಿ. ಕಳೆದ ಬಾರಿ ಬಜೆಟ್ ಗಾತ್ರ 2.65 ಲಕ್ಷ ಕೋಟಿ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸೇರಿ ಮೂರುವರೆ ವರ್ಷಗಳಲ್ಲಿ ಮಾಡಿರುವ ಸಾಲ 3 ಲಕ್ಷ ಕೋಟಿ. ಸಿದ್ದರಾಮಯ್ಯ ಅವರ ಆಡಳಿತಾವಧಿಯ 5 ವರ್ಷದಲ್ಲಿ ಕೇವಲ 98 ಸಾವಿರ ಕೋಟಿ ಸಾಲ ಇತ್ತು. 1947 ರಿಂದ 2018 ರವರಗೆ ರಾಜ್ಯದಲ್ಲಿ ಒಟ್ಟಾರೆ ಸಾಲ 2 ಲಕ್ಷ 42 ಸಾವಿರ ಕೋಟಿ ರೂ.ಇತ್ತು. ಬಿಜೆಪಿ ಸರ್ಕಾರ ಕೇವಲ ಮೂರುವರೆ ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದೆ. ಸಾಲ ಮಾಡಿರುವುದೇ ಬಿಜೆಪಿ ಸರ್ಕಾರದ ದೊಡ್ಡ ಸಾಧನೆ. ಒಂದು ವರ್ಷಕ್ಕೆ ಬಡ್ಡಿಯನ್ನೇ 29 ಸಾವಿರ ಕೋಟಿ ಕೊಟ್ಟಬೇಕಿದೆ ಎಂದು ಕಿಡಿಕಾರಿದರು.
ಕಳೆದ ಬಜೆಟ್ ನಲ್ಲಿ ಸುಮಾರು 339 ಯೋಜನೆಗಳ ಭರವಸೆ ಕೊಟ್ಟದ್ದರು. ಅದರಲ್ಲಿ ಅನುಷ್ಠಾನಕ್ಕೆ ಬಂದಿದ್ದು ಕೇವಲ 207 ಮಾತ್ರ. ಇನ್ನು 132 ಕಾರ್ಯಕ್ರಮ ಅನುಷ್ಠಾನವಾಗಲೇ ಇಲ್ಲ. ರೈತರಿಗಾಗಿ 112 ಭರವಸೆ ನೀಡಿದ್ರು ಅದರಲ್ಲಿ ಕೇವಲ 15 ಮಾತ್ರ ಈಡೇರಿದೆ. ನೇಕಾರರ ಅಭಿವೃದ್ಧಿಗೆ 1000 ಕೋಟಿ ಮೀಸಲು ಇಟ್ಟಿದ್ದರು. ಕೆಲಸ ಏನಾಯಿತು ಅಂತ ಗೊತ್ತಿಲ್ಲ. ಕಳೆದ ವರ್ಷ ಮಂಡಿಸಿದ ಬಜೆಟ್ ಒಟ್ಟು ಗಾತ್ರದಲ್ಲಿ ಕೇವಲ 56% ಮಾತ್ರ ಬಳಕೆಯಾಗಿದೆ. ಇನ್ನು ಸುಮಾರು 1.4 ಲಕ್ಷ ಕೋಟಿ ಏನಾಯಿತು ಗೊತ್ತಿಲ್ಲ ಎಂದು ಎಂ.ಲಕ್ಷ್ಮಣ್ ಚಾಟಿ ಬೀಸಿದರು.
ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಅರಗ ಜ್ಞಾನೇಂದ್ರ ಗೃಹ ಸಚಿವರಾದ ಬಳಿಕ ರಾಜ್ಯದಲ್ಲಿ 1036 ಕೊಲೆ,21365 ದರೊಡೆ,3017 ಗುಂಪು ಘರ್ಷಣೆ ಮತ್ತು15 ಮಂದಿ ಕೋಮು ಗಲಭೆಯಲ್ಲಿ ಸತ್ತಿದ್ದಾರೆ. ಇದೇ ಇವರ ಸಾಧನೆ ಎಂದು ಎಂ ಲಕ್ಷಣ್ ಹರಿಹಾಯ್ದರು.
ಮಹಿಳೆಯರಿಗೆ 26 ಭರವಸೆಗಳನ್ನ ನೀಡಿದ್ದರು ಅದರಲ್ಲಿ ಕೇವಲ 2 ಮಾತ್ರ ಈಡೇರಿವೆ. ಯುವಕರಿಗೆ 18 ಭರವಸೆ ಕೊಟ್ಟಿದ್ರಿ ಕೇವಲ 1 ಮಾತ್ರ ಈಡೇರಿದೆ. ರಾಜ್ಯದಲ್ಲಿ ಸುಮಾರು 2.65 ಲಕ್ಷ ಹುದ್ದೆಗಳು ಖಾಲಿ ಇವೆ. ಅದನ್ನು ತುಂಬುವ ಕೆಲಸ ಮಾಡಲಿಲ್ಲ. ಪಿಎಸ್ಐ ಹಗರಣದಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಮಾಡಿದರು. ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಿಬೇಕು. ಆಗ ಈ ಪ್ರಕರಣದಲ್ಲಿ ಯಾರು ಯಾರು ಶಾಮೀಲು ಆಗಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಎಂ.ಲಕ್ಷ್ಮಣ್ ಆಗ್ರಹಿಸಿದರು.
ನಾಳೆಯಿಂದ ಕಿವಿ ಮೇಲೆ ಹೂ ಪೋಸ್ಟರ್ ಅಭಿಯಾನ- ಬಿ.ಜೆ ವಿಜಯಕುಮಾರ್.
ಹಾಗೆಯೇ ಮೈಸೂರಿನಲ್ಲಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ.ಜೆ ವಿಜಯಕುಮಾರ್ ಮಾತನಾಡಿ, ನಾಳೆಯಿಂದ ಕಿವಿ ಮೇಲೆ ಹೂ ಪೋಸ್ಟರ್ ಅಭಿಯಾನ ನಡೆಸಲಿದ್ದೇವೆ. ಮೈಸೂರಿನಲ್ಲಿ ಎಲೆಲ್ಲಿ ಬಿಜೆಪಿ ಭರವಸೆ ಎಂಬ ಪೋಸ್ಟರ್ ಅಂಟಿಸಿದ್ದಾರೆ. ಅದನ್ನ ಇಂದು ಗುರುತು ಮಾಡುತ್ತಿದ್ದೇವೆ. ನಾಳೆಯಿಂದ ಬಿಜೆಪಿ ಭರವಸೆ ಪೋಸ್ಟರ್ ಪಕ್ಕದಲ್ಲಿ ಕಿವಿ ಮೇಲೆ ಹೂ ಪೋಸ್ಟರ್ ಅಂಟಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಅಂದರೆ ಅದು ಬರಿ ಭರವಸೆ ಅಷ್ಟೇ. ಕಾಂಗ್ರೆಸ್ ಅಂದ್ರೆ ಅದು ಗ್ಯಾರೆಂಟಿ. ಇದೇ ತಿಂಗಳ 21 ರಂದು ಎಐಸಿಸಿ ಸೆಕ್ರೆಟರಿ ಸುರ್ಜೆವಾಲ ನೇತೃತ್ವದಲ್ಲಿ ಕಾಂಗ್ರೆಸ್ ನ ಮೂರು ಗ್ಯಾರೆಂಟಿ ಸ್ಕೀಮ್ ಗಳ ಬಿಡುಗಡೆ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣದಲ್ಲೇ ಪ್ರತಿ ಮನೆಯ ಗೃಹಿಣಿಗೆ 2 ಸಾವಿರ. ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತ, 10 ಕೆಜಿ ಅಕ್ಕಿ ಕೊಡುವಂತ ಗ್ಯಾರೆಂಟಿ ಕಾರ್ಯಗಳನ್ನು ಬಿಡುಗಡೆ ಮಾಡುತ್ತೇವೆ. ನಾವು ಬಿಜೆಪಿ ತರ ಭರವಸೆ ಕೊಡುವುದಿಲ್ಲ. ಗ್ಯಾರೆಂಟಿ ಕೊಡುತ್ತೇವೆ ಎಂದು ಹೇಳಿದರು.
Key words: 3 lakh crore- loan –BJP government – KPCC spokesperson-M. Laxman-budget