ಬೆಂಗಳೂರು:ಆ-23:(www.justkannada.in) ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಸಚಿವ ಸಂಪುಟ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ರಾಷ್ತ್ರೀಯ ಸಂಘಟನಾಕಾರ್ಯದರ್ಶಿ ಬಿ ಎಲ್ ಸಂತೋಷ್ ಹಿಡಿತ ಸಾಧಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ವೇಳೆ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಎಂ ಯಡಿಯೂರಪ್ಪ ಕೂಡ ಬಿ ಎಲ್ ಸಂತೋಷ್ ರತ್ತ ಬೆರಳು ತೋರಿಸಿ ತಾವು ಸೇಪ್ ಆಗುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಹಲವು ದಿನಗಳು ಕಳೆದ ಬಳಿಕ ವಿಳಂಬವಾಗಿ ಸಂಪುಟ ರಚನೆಗೆ ಅನುಮತಿ ನೀಡಿದ್ದು, ಸಚಿವರ ಆಯ್ಕೆ ಸಂದರ್ಭದಲ್ಲಿ ಪಟ್ಟಿ ಬದಲಿಸಿದ್ದು, ರಾಜ್ಯಘಟಕದ ಅಧ್ಯಕ್ಷರನ್ನು ತಮ್ಮ ಆಪ್ತರನ್ನ್ ಆಯ್ಕೆಮಾಡಿರುವುದು ಕೂಡ ಬಿ ಎಲ್ ಸಂತೋಷ್ ಸರ್ಕಾರದಲ್ಲಿ ಹೆಚ್ಚು ಹಿಡಿತಹೊಂದಿದ್ದಾರೆ ಎನ್ನಲು ಕಾರಣವಾಗಿದೆ.
ಸಚಿವ ಸಂಪುಟ ರಚನೆ ವಿಚಾರದಲ್ಲಿ ಹಲವು ಆಕಾಂಕ್ಷಿಗಳಿಗೆ ಅಸಮಾಧಾನವಿದ್ದರೂ ಕೆಲವರು ಸುಮ್ಮನಿದ್ದು, ಯಡಿಯೂರಪ್ಪ ಆಪ್ತವಲಯದಲ್ಲಿಯೆ ಪರಿಸ್ಥಿತಿ ಬೂದಿಮುಚ್ಚಿದ ಕೆಂದದಂತಿದೆ ಎನ್ನಲಾಗಿದೆ. ಈ ನಡುವೆ ಕೆಲ ಶಾಸಕರಾದ ಮಡಿಕೇರಿಯ ಅಪ್ಪಚ್ಚುರಂಜನ್, ಗೀಳಿಹಟ್ಟಿ ಶೇಖರ್ ಅವರಂತಹ ಸಚಿವ ಸ್ಥಾನದ ಆಕಾಂಕ್ಷಿಗಳು ಬಿ ಎಸ್ ಯಡಿಯೂರಪ್ಪ ದ್ವಿಮುಖ ಧೋರಣೆ ಅನುಸರಿಸುತ್ತಿದ್ದಾರೆ. ನಿಷ್ಠಾವಂತರಿಗೆ ಸಚಿವ ಸ್ಥಾನ ನೀಡದೇ ಬೇರೆಯವರಿಗೆ ಮಣೆಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಪಕ್ಷಕ್ಕಾಗಿ ದುಡಿದ ಹಲವರನ್ನು ಕೈಬಿಟ್ಟು, ಶಾಸಕರಲ್ಲದ ಲಕ್ಷ್ಮಣ್ ಸವದಿಯಂತವರಿಗೆ ಹಾಗೂ ಬಸವರಾಜ್ ಬೊಮ್ಮಾಯಿ ಅವರಿಗೆ ಕೊನೇಕ್ಷಣದ ಪ್ರಯತ್ನವೆಂಬಂತೆ ಸ್ಥಾನ ನೀಡುವ ಮೂಲಕ ಇಬ್ಬಗೆ ಧೋರಣೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಸಂಪುಟಕ್ಕೆ ಲಕ್ಷ್ಮಣ್ ಸವದಿ ಸೇರ್ಪಡೆ ಯಡಿಯೂರಪ್ಪ ಅವರಿ ಇಕ್ಕಟ್ಟಿಗೆ ಸಿಲುಕಿಸಿದ್ದು, ಸವದಿಯವರನ್ನು ಗುರಿಯಾಗಿಟ್ಟುಕೊಂಡು ಅತೃಪ್ತ ಶಾಸಕರು ಒತ್ತಡ ಹೇರುವ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಒಂದೆಡೆ ಹಿರಿಯ ಶಾಸಕರಾಗಿರುವ ಉಮೇಶ್ ಕತ್ತಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಸವದಿ ಅವರನ್ನು ಕೈಬಿಡಿ ಎಂಬ ಕೂಗು ಕೂಡ ಕೇಳಲಾರಂಭಿಸಿದೆ. ಇನ್ನೊಂದೆಡೆ ಉಮೇಶ್ ಕತ್ತಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕತ್ತಿ ಬಂದಾಯವೇಳುವ ಲಕ್ಷಣಗಳು ಗೋಚರಿಸುತ್ತಿದ್ದು, ಬಿಜೆಪಿಗೆ ಆತಂಕ ಶುರುವಾಗಿದೆ. ಈ ಎಲ್ಲಾ ಬೆಳವಣಿಗೆಯಿಂದ ವಿಚಲಿತರಾಗಿರುವ ಸಿಎಂ ಯಡಿಯೂರಪ್ಪ ಅತೃಪ್ತರ ಸಮಾಧಾನಪಡಿಸುವ ನಿಟ್ಟಿನಲ್ಲಿ ದೆಹಲಿಗೆ ತೆರಳಿದ್ದಾರೆ.
ಸಂಪುಟ ವಿಸ್ತರಣೆಯಿಂದ ಉಂಟಾಗುವ ಅಸಮಾಧಾನ ಹಾಗೂ ಖಾತೆ ಹಂಚಿಕೆ ವಿಚಾರ ಸಿಎಂಗೆ ಸವಾಲಾಗಿ ಪರಿಣಮಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಹಾಗೂ ವರಿಷ್ಠರನ್ನು ವಿಶ್ವಾಸಕ್ಕೆ ಪಡೆಯುವ ಲೆಕ್ಕಾಚಾರದೊಂದಿಗೆ ಸಿಎಂಯಡಿಯೂರಪ್ಪ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿ ಮಾಡಲಿದ್ದಾರೆ.