ಬೆಂಗಳೂರು,ಮಾರ್ಚ್,1,2023(www.justkannada.in): ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಗೊಮ್ಮಟ ಮಾಧ್ಯಮ ಪ್ರಶಸ್ತಿಗೆ ಪ್ರಜಾವಾಣಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರನ್ನು ಆಯ್ಕೆ ಮಾಡಲಾಗಿದೆ.
ವರದಿಗಾರರಾಗಿ, ಸಂಪಾದಕ ಹುದ್ದೆಯ ತನಕ ಮೂರು ದಶಕಗಳ ಕಾಲ ಅವರು ಪತ್ರಿಕೋದ್ಯಮದಲ್ಲಿ ಮಾಡಿರುವ ಸುಧೀರ್ಘ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಪ್ರಶಸ್ತಿಯು 10 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಗೊಮ್ಮಟ ಮಾಧ್ಯಮ ಪ್ರಶಸ್ತಿಯನ್ನು ಶ್ರವಣಬೆಳಗೊಳ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ಥಾಪಿಸಿದ್ದಾರೆ.
ಮೈಸೂರಿನಲ್ಲಿ ನಡೆಯುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವಿವರ:
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕು ಐನಕೈ ಯಲ್ಲಿ1967 ರಲ್ಲಿ ಗಜಾನನ ಭಟ್ಟ ಮತ್ತು ಮೀನಾಕ್ಷಿ ಭಟ್ಟ ಅವರ ಪುತ್ರನಾಗಿ ಜನಿಸಿದರು. ದೀಪಾ ಜೊತೆಗೆ ಸಂಸಾರ ಜೀವನ ಶುರು ಮಾಡಿದ ಅವರಿಗೆ ನಿಕೇತನ ಮತ್ತು ನಿರಂಜನ ಎಂಬ ಇಬ್ಬರು ಮಕ್ಕಳಿದ್ದಾರೆ.
ಶಿರಸಿಯಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಕರ್ನಾಟಕ ವಿವಿಯಲ್ಲಿ ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವ್ಯಾಸಂಗ ಮುಗಿಸಿದರು.
1990ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭ. ನಂತರ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ. 1995ರಿಂದ ಪ್ರಜಾವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಕಟಿತ ಕೃತಿಗಳು:
ಇವರೇ ಬರಮಾಡಿಕೊಂಡ ಬರ, ಹೆಜ್ಜೇನು (ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ), ಬದುಕು ಮರದ ಮೇಲೆ, ಮೂರನೇ ಕಿವಿ, ಸಂಪನ್ನರು, ಅಕ್ಷಯ ನೇತ್ರ, ಮೈಸೂರೆಂಬ ಬೆರಗು, ಸಹಸ್ರಪದಿ, ಇಂಥವರೂ ಇದ್ದಾರೆ ಜಗದೊಳಗೆ, ಜನಕಂಜಿ ನಡೆಯದವರ ಸಂತೆ. ರಾಜಕಾರಣದಲ್ಲಿ ನಿಂಬೆ, ಹಾಗಲ.
ಪ್ರಶಸ್ತಿಗಳು:
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನೀಡುವ ಮಹಾತ್ಮಾಗಾಂಧಿ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ನಾರಾಯಣಸ್ವಾಮಿ ಪ್ರಶಸ್ತಿ, ಮುರುಘಾಶ್ರೀ ಪ್ರಶಸ್ತಿ, ಬೆಂಗಳೂರಿನ ಸಿಡಿಎಲ್ ಸಂಸ್ಥೆ ನೀಡುವ ಚರಕ ಪ್ರಶಸ್ತಿ, ಎಚ್.ಎಸ್.ಕೆ. ಪ್ರತಿಷ್ಠಾನದ ಎಚ್.ಎಸ್.ಕೆ. ಪ್ರಶಸ್ತಿ, ರೋಟರಿ ಸಿಲಿಕಾನ್ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆ ನೀಡುವ ಕೆಂಪೇಗೌಡ ಪ್ರಶಸ್ತಿ, ಡಾ.ಶಾಂತಾರಾಧಾಕೃಷ್ಣ ಎಂಡೋಮೆಂಟ್ ಪ್ರಶಸ್ತಿ. ಕರ್ನಾಟಕ ಅಕ್ಷರ ಪ್ರಶಸ್ತಿ, ಎಚ್.ಕೆ.ವೀರಣ್ಣ ಗೌಡ ಪತ್ರಿಕೋದ್ಯಮ ಪ್ರಶಸ್ತಿ. ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ. ಪಾ.ವೆಂ.ಆಚಾರ್ಯ ಮಾಧ್ಯಮ ಪ್ರಶಸ್ತಿ. ಅಂಕಣ ಬರಹಗಳಿಗೆ ಮಾಸ್ತಿ ಪ್ರಶಸ್ತಿ.
Key words: Senior Journalist -Ravindra Bhatta -selected – KUWJ- Gommata Media Award