ಮೈಸೂರು,ಮಾರ್ಚ್,6,2023(www.justkannada.in): ಮೈಸೂರು ಬೆಂಗಳೂರು ದಶಪಥ ರಸ್ತೆಗೆ ಕ್ರೆಡಿಟ್ ವಾರ್ ಶುರುವಾಗಿದ್ದು, ಈ ನಡುವೆ ಮಾರ್ಚ್ 9 ರಂದು ಮಾಜಿ ಸಿಎಂ ಸಿದ್ದರಾಮಯ್ಯ ದಶಪಥ ರಸ್ತೆ ಪರಿಶೀಲನೆಗೆ ಮುಂದಾಗಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಮಾರ್ಚ್ 9 ರಂದು ಬೆಂಗಳೂರು ಮೈಸೂರು ಹೈವೇ ಪರಿಶೀಲನೆ ನಡೆಸುತ್ತೇನೆ. ಆ ರಸ್ತೆಯ ಕ್ರೆಡಿಟ್ ನಮ್ಮ ಸರ್ಕಾರಕ್ಕೆ ಸಲ್ಲಬೇಕು. ಪ್ರತಾಪ್ ಸಿಂಹನದ್ದಾಗಲಿ ಬಿಜೆಪಿ ಸರ್ಕಾರದ್ದಾಗಲಿ ಯಾವ ಪಾತ್ರವೂ ಇಲ್ಲ. ಮತ್ತೆ ಪ್ರತಾಪ್ ಸಿಂಹ ಲೋಕಸಭಾ ವ್ಯಾಪ್ತಿಗೆ ಕೆಲ ಕಿ.ಮೀ ಮಾತ್ರ ಸೇರುತ್ತದೆ. ಆದರೂ ನಮ್ಮದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಪ್ರತಾಪ್ ಸಿಂಹನ ಪಾತ್ರ ಏನು ಇಲ್ಲ. ಮಹದೇವಪ್ಪನಿಗೆ ಈ ರಸ್ತೆಯ ಎಲ್ಲಾ ಮಾಹಿತಿಯೂ ಗೊತ್ತಿದೆ. ಮಹದೇವಪ್ಪ ಮುಂದೆ ನಿಂತು ಈ ರಸ್ತೆ ಮಾಡಿಸಿದ್ದಾರೆ ನಾನು ಇದ್ದೆ, ಆಗ ಆಸ್ಕರ್ ಫರ್ನಾಂಡೀಸ್ ಕೇಂದ್ರ ಸಚಿವರಾಗಿದ್ದರು. ಅವರ ಕಾಲದಲ್ಲೇ ರಸ್ತೆಗೆ ಅಪ್ರುವಲ್ ಆಗಿತ್ತು. ಈಗ ಆಸ್ಕರ್ ಫರ್ನಾಂಡೀಸ್ ಬದುಕಿಲ್ಲ. ಎಲ್ಲವೂ ಮಹದೇವಪ್ಪನ ಕಾಲದಲ್ಲಿ ಆಗಿದೆ. ನಮ್ಮ ಸರ್ಕಾರದ ಕೊಡುಗೆ ದಶಪಥ ರಸ್ತೆ ಎಂದು ಹೇಳಿದರು.
ನಾನು ಬದುಕಿರುವವರೆಗೆ ಆರ್ ಎಸ್ಎಸ್ ವಿರೋಧ ಮಾಡುತ್ತೇನೆ..
ಇನ್ನು ತಿ.ನರಸೀಪುರದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಮೇಲ್ಜಾತಿ ಮತ್ತು ಮೇಲ್ವರ್ಗದವರ ಪಕ್ಷ. ಸಂವಿಧಾನವನ್ನು ವಿರೋಧ ಮಾಡುವರೆಂದರೆ ಆರ್ ಎಸ್ಎಸ್ ಮತ್ತು ಹಿಂದೂ ಮಹಾಸಭಾ. ಆರ್ ಎಸ್ಎಸ್ ನವರು ಸನಾತನ ಧರ್ಮದ ಪೋಷಕರು. ಅಂಬೇಡ್ಕರ್ ಹಿಂದೂ ಧರ್ಮವನ್ನು ಯಾಕೆ ಬಿಟ್ರು. ನಾನು ಹಿಂದೂ ಆಗಿ ಹುಟ್ಟಿದೆ ಸುಧಾರಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ಬೌದ್ಧ ಧರ್ಮ ಸ್ವೀಕರಿಸಿದರು ಎಂದರು.
ನಾನೊಬ್ಬ ಹಿಂದುಳಿದವನು. ಮೇಲ್ಜಾತಿ ಕೆಳಜಾತಿ ಎನ್ನುವುದು ಬೇಡ ಎಲ್ಲಾ ಸಮಾನರು ಅಂತಾನೆ ಬಸವಣ್ಣ ಅನುಭವ ಮಂಟಪ ಮಾಡಿದರು. ಯಾವ ಧರ್ಮದಲ್ಲಿ ಮನುಷ್ಯ ಮನುಷ್ಯನನ್ನ ವಿರೋಧ ಮಾಡು ಅಂತ ಹೇಳುತ್ತೆ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
ಸಿ ಟಿ ರವಿ ಸಿದ್ದರಾಮುಲ್ಲ ಖಾನ್ ಎಂದು ಕರಿತ್ತಾನೆ. ಅವರ ಭಾಷಣ ಕೇಳಿ ಚಪ್ಪಾಳೆ ತಟ್ಟುವ ನಾವು ಶೂದ್ರರು. ನಾನು ಬದುಕಿರುವವರೆಗೆ ಆರ್ ಎಸ್ಎಸ್ ವಿರೋಧ ಮಾಡುತ್ತೇನೆ. ಎಸ್ ಇ ಪಿ ಮತ್ತು ಟಿ ಎಸ್ ಪಿ ಅನುದಾನವನ್ನು ಬಜೆಟ್ ನಲ್ಲಿ ಕಡಿಮೆ ಮಾಡಿದ್ದಾರಲ್ಲ. ಯಾರಾದರೂ ಕೇಳಿದ್ದೀರಾ. ಗೋವಿಂದ ಕಾರಾಜೋಳ, ಶ್ರೀನಿವಾಸ್ ಪ್ರಸಾದ್ ಅಳಿಯ ಶಾಸಕ ಕೇಳಿದ್ದಾರಾ..? ಮತ್ತೆ ಯಾಕೆ ಬಿಜೆಪಿಯಲ್ಲಿ ಇದ್ದೀರಾ. ಕಾರಜೋಳ ಸಚಿವರಾಗಿದ್ದಾರೆ. ಮಜಾ ಮಾಡ್ಕೊಂಡು ಕೂತಿದ್ದಾರೆ ಎಂದು ಕಿಡಿಕಾರಿದರು.
ಮೈಸೂರು-ಬೆಂಗಳೂರು ದಶಪಥ ಹೈವೇ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು- ಹೆಚ್.ಸಿ ಮಹದೇವಪ್ಪ.
ಹಾಗೆಯೇ ಮೈಸೂರು-ಬೆಂಗಳೂರು ದಶಪಥ ಹೈವೇ ಕ್ರೆಡಿಟ್ ಕುರಿತು ಮಾತನಾಡಿದ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ಮೈಸೂರು-ಬೆಂಗಳೂರು ದಶಪಥ ಹೈವೇ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ಇದರ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು. ಯುಪಿಎ ಸರ್ಕಾರದ ಅವಧಿಯಲ್ಲಿ 2 ಸಾವಿರ ಕಿ.ಮೀ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು 2014 ರಲ್ಲಿ ಅನುಮೋದನೆ ನೀಡಲಾಯಿತು. ರಾಜ್ಯದಲ್ಲಿಯೂ ಆಗ ಕಾಂಗ್ರೆಸ್ ಪಕ್ಷದ ಸರ್ಕಾರವಿತ್ತು. ನಾನು ಸಹ ಲೋಕೋಪಯೋಗಿ ಸಚಿವನಾಗಿದ್ದುಕೊಂಡು ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಿದ್ದೇನೆ. ಆ ಬಳಿಕ ಬಂದ ಎನ್ ಡಿಎ ಸರ್ಕಾರ ಇದನ್ನು ವಿಶ್ವಕಾರ್ಯಗತಗೊಳಿಸಿದೆಯಷ್ಟೇ. ಹಾಗಾಗಿ ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೇ ಸಲ್ಲಬೇಕು ಎಂದರು.
Key words: Mysore-Bangalore- Dashpath Road- Credit –War-Former CM -Siddaramaiah