ಮೈಸೂರು,ಮಾರ್ಚ್,6,2023(www.justkannada.in): ಗೃಹ ಬಳಕೆ ಸಿಲಿಂಡರ್ ದರ ದಿಢೀರನೆ 50 ರೂಪಾಯಿ ಏರಿಕೆ ವಿರುದ್ಧ ಹಾಗೂ ಇತರೆ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಮೈಸೂರು ಜಿಲ್ಲೆ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದು ಮೈಸೂರಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ ಪುಷ್ಪ ಅಮರನಾಥ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆ ವೇಳೆ ಗ್ಯಾಸ್ ಸಿಲಿಂಡರ್ ಮೇಲೆ ಸೌಟಿನಿಂದ ಕುಟ್ಟಿ ಬಿಜೆಪಿ ಸರ್ಕಾರ ವಿರುದ್ಧ ಕಿಡಿಕಾರಿದರು.
ಈ ವೇಳೆ ಮಾತನಾಡಿದ ಡಾ.ಪುಷ್ಪಾ ಅಮರನಾಥ್, ಬಿಜೆಪಿ ಸರ್ಕಾರ ಬಂದ ನಂತರ ನಿರಂತರವಾಗಿ ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಏರಿಕೆ ಮಾಡುತ್ತಲೇ ಬಂದಿದ್ದಾರೆ. 410 ರೂಪಾಯಿ ಇದ್ದ ಗ್ಯಾಸ್ ಬೆಲೆ ಇಂದು 1200 ರೂಪಾಯಿಗೆ ಬಂದಿದೆ. ದುಡ್ಡು ಮಾಡಲೆಂದೇ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ. ನಿಮ್ಮ ದಮ್ಮು ತಾಕತ್ತನ್ನು ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡಿ ತೋರಿಸಿ. ಸಿದ್ದರಾಮಯ್ಯರನ್ನು ಹೊಡೆದು ಹಾಕಿ ಎಂದು ಹೇಳುವ ಬಿಜೆಪಿಗರೇ , ಬೆಲೆ ಏರಿಕೆ ಬಗ್ಗೆ ಮಾತಾಡಿ ಎಂದು ಕಿಡಿಕಾರಿದರು.
ಹಾಗೆಯೇ ಬಿಜೆಪಿ ಮಹಿಳಾ ಮೋರ್ಚಾದ ವಿರುದ್ದ ವಾಗ್ದಾಳಿ ನಡೆಸಿದ ಪುಷ್ಪಾ ಅಮರನಾಥ್ ನಿಮ್ಮ ಮನೆಯಲ್ಲಿ ಅಡುಗೆ ಮಾಡಲ್ವಾ ..? ದರ ಏರಿಕೆ ಬಗ್ಗೆ ನೀವ್ಯಾಕೆ ಮಾತಾನಾಡುತ್ತಿಲ್ಲ ? ಎಂದು ಕುಟುಕಿದರು.
ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಗ್ರಾಮಾಂತರ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ ಕೆಪಿಸಿಸಿ ಮಹಿಳಾ ಉಪಾಧ್ಯಕ್ಷೆ ಪುಷ್ಪವಲ್ಲಿ ಬ್ಲಾಕ್ ಅಧ್ಯಕ್ಷೆ ಚಂದ್ರಕಲಾ, ರಾಧಾಮಣಿ, ಲತಾ ಮೋಹನ್, ಭವ್ಯ, ದಿವ್ಯ, ಮಹಿಳಾ ಪದಾಧಿಕಾರಿಗಳಾದ ಸುಜಾತಾ ರಾವ್, ಸಾಕಿರಾ, ಕಮಲ, ಮಂಜುಳಾ ಮಂಜುನಾಥ್, ನಾಗರತ್ನ, ಹೇಮಾ ಸಿಂಗ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಡೊನಾಲ್ಡ್, ಮೈಸೂರು ನಗರ NSUI ಅಧ್ಯಕ್ಷ ಮನೋಜ್, ವಿನೋದ್ ಉಪಸ್ಥಿತರಿದ್ದರು.
Key words: Protest-Congress –Women-Mysore gas -rate -hike