ಬೆಂಗಳೂರು:ಆ-26:(www.justkannada.in) ಪತ್ನಿ ಮತ್ತು ಆಕೆಯ ತಾಯಿಯ ಕಿರುಕುಳದಿಂದ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಹೈಕೋರ್ಟ್ ಇದೊಂದು ವಿಚಿತ್ರ ಪ್ರಕರಣವೆಂದು ಪರಿಗಣಿಸಿ, ಇನ್ನಷ್ಟು ತನಿಖೆಗೆ ಆದೇಶಿ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಶ್ರೀನಿವಾಸ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪತ್ನಿ ಹಾಗೂ ಆಕೆಯ ತಾಯಿ, ಸಂಬಂಧಿಕರ ಕಿರುಕುಳ, ನಿಂದನೆಗಳಿಂದ ಬೇಸತ್ತು ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಮೂಲತಹ ಶಿವಮೊಗ್ಗದವರಾದ ಶ್ರೀನಿವಾಸ್ ಹಾಗೂ ಸುಮಾ ಕುಟುಂಬಸ್ಥರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಶ್ರೀನಿವಾಸ್ ತಡವಾಗಿ ಮನೆಗೆ ಬರುತ್ತಿದ್ದುದಕ್ಕೆ ಪತ್ನಿ ಹಾಗೂ ಆಕೆಯ ತಾಯಿ ಶ್ರೀನಿವಾಸ್ ನನ್ನು ನಿಂದಿಸುತ್ತಿದ್ದರಲ್ಲದೇ ಅವಮಾನಿಸುತ್ತಿದ್ದರು. ಅನಾರೋಗ್ಯದಿಂದಲೂ ಬಳಲುತ್ತಿದ್ದ ಆತನನ್ನು ಸಣ್ಣ ಸಣ್ಣ ವಿಚಾರಗಳಿಗೂ ಹಿಂಸಿಸುತ್ತಿದ್ದರು. ಇದರಿಂದ ಆತ ಮನೆಬಿಟ್ಟು ಸಹೋದನನ ಮನೆಗೆ ಬಂದು ಬೇಸತ್ತು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ.
ಮೇ 17, 2019ರಂದು ಶ್ರೀನಿವಾಸ್ ಸಹೋದರ ರಮೇಶ್, ಮನೆಗೆ ಹೋಗುವಂತೆ ತಿಳಿಸಿದ್ದ. ಆದರೆ ಶ್ರೀನಿವಾಸ್, ಮನೆಗೆ ಹೋದರೆ ಪತ್ನಿ ಹಾಗೂ ಆಕೆಯ ಕುಟುಂಬದವರು ಜಗಳ ಮಾಡುತ್ತಾರೆ ಹಿಗಾಗಿ ಇಲ್ಲಿಯೇ ಇರುವುದಾಗಿ ಹೇಳಿ ಅಂದು ಅಲ್ಲಿಯೇ ಇದ್ದ. ರಮೇಶ್ ಕೆಲಸದ ಮೇಲೆ ಹೊರಗೆ ಹೋಗಿ ಮೇ 19ರಂದು ಮನೆಗೆ ಬಂದಾಗ ಶ್ರೀನಿವಾಸ್ ಸೀಲಿಂಗ್ ಫ್ಯಾನ್ ಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಅಲ್ಲದೇ ಡೆತ್ ನೋಟ್ ಕೂಡ ಬರೆದು ತನ್ನ ಸಾವಿಗೆ ಪತ್ನಿ ಹಾಗೂ ಆಕೆಯ ಕುಟುಂಬ ಸದಸ್ಯರೇ ಕಾರಣ ಎಂದು ಬರೆದಿದ್ದ. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ಹೈಕೋರ್ಟ್, ಇದೊಂದು ವಿಚಿತ್ರ ಪ್ರಕರಣವಾಗಿ ಕಾಣುತ್ತಿದೆ. ಅಲ್ಲದೇ ಹಲವಾರು ಅನುಮಾನಗಳೂ ಮೂಡುತ್ತವೆ. ಪತ್ನಿ ಹಾಗೂ ಆಕೆ ಮನೆಯಯವರ ವಿರುದ್ಧ ಆರೋಪ ಮಾಡಲಾಗಿದೆ. ಅಲ್ಲದೇ ಆತ ತನ್ನ ಸಹೋದರನ ಮನೆಗೆ ಬಂದು ಆತ್ಮಹತ್ಯೆಮಾಡಿಕೊಂಡಿದ್ದಾನೆ. 17-5-2019 ಹಾಗೂ 19-5-2019 ಈ ಅವಧಿಯಲ್ಲಿ ಏನಾಯಿತು ಎಂಬುದನ್ನು ದೂರಿನಲ್ಲಿ ತಿಳಿಸಿಲ್ಲ. ಅರ್ಜಿದಾರರ ಮನೆಯಲ್ಲಿಯೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎಂಬುದೂ ಸರಿಯಾಗಿ ತಿಳಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಇದ್ದು, ಪ್ರಕರಣದ ಬಗ್ಗೆ ಕೂಲಂಕುಷವಾಗಿ ಇನ್ನಷ್ಟು ತನಿಖೆ ನಡೆಸಬೇಕೆಂದು ನ್ಯಾಯಾಲಯ ಸೂಚಿಸಿದೆ.
ಅಲ್ಲದೇ ಶ್ರೀನಿವಾಸ್ ಪತ್ನಿ ಹಾಗೂ ಆಕೆಯ ಕುಟುಂಬದವರಿಗೆ 50,000 ರೂ ಬಾಂಡ್ ಹಾಗೂ ಶ್ಯೂರಿಟಿ ಆಧಾರದಲ್ಲಿ ಷರತ್ತು ಬದ್ಧ ಜಾಮೀನು ನೀಡಿದೆ. ತನಿಖೆಗೆ ಸಹಕರಿಸುವಂತೆ ಹಾಗೂ ಅನುಮತಿಯಿಲ್ಲದೇ ಬೆಂಗಳೂರು ಬಿಟ್ಟು ಹೋಗದಂತೆಯೂ ಸೂಚಿಸಿದೆ. ಚಾರ್ಜ್ ಶೀಟ್ ದಾಖಲಿಸಿಕೊಂಡಿರುವ ಪೊಲೀಸರು ಕೂಲಂಕುಷ ತನಿಖೆ ಆರಂಭಿಸಿದ್ದಾರೆ.