ಮೈಸೂರು,ಮೇ,1,2023(www.justkannada.in): ವರುಣಾದಲ್ಲಿ ಬಿಜೆಪಿ ಪರ ವಾತಾವರಣ ಸೃಷ್ಠಿಯಾಗುತ್ತಿದೆ. ಹೀಗಾಗಿ ಹತಾಶೆಯಿಂದ ಕಾಂಗ್ರೆಸ್ ನವರು ಅಲ್ಲಿ ಗಲಾಟೆ ಮಾಡಿಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮೋದಿ, ಅಮಿತ್ ಶಾ ಬಂದ ಮೇಲೆ ನಮ್ಮ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುತ್ತಿದೆ. ವರುಣದಲ್ಲಿ ಹತಾಶೆಯಿಂದ ಕಾಂಗ್ರೆಸ್ ನವರು ಗಲಾಟೆ ಮಾಡಿಸುತ್ತಿದ್ದಾರೆ. ಮೊದಲೆಲ್ಲಾ ಬಹಳ ಸುಲಭವಾಗಿ ಕಾಂಗ್ರೆಸ್ ನವರು ಗೆದ್ದು ಬಿಡುತ್ತಿದ್ದರು. ಈ ಬಾರಿ ಪರಿಸ್ಥಿತಿ ಅವರಿಗೆ ಇಲ್ಲ. ಹೀಗಾಗಿ ಇತರಹದ ಗಲಾಟೆ ಹೆಚ್ಚಾಗುತ್ತಿವೆ. ದಿನದಿನಕ್ಕೂ ಬಿಜೆಪಿ ಪರವಾದ ವಾತಾವರಣ ಅಲ್ಲಿ ಸೃಷ್ಟಿಯಾಗುತ್ತಿದೆ. ಜನರನ್ನ ಭಯ ಬೀಳಿಸಿ ಮತ ಹಾಕದಂತೆ ತಡೆಯುವುದು ಕಾಂಗ್ರೆಸ್ ನ ಉದ್ದೇಶ. ಕಾಂಗ್ರೆಸ್ ಈ ಹಳೇ ಚಾಳಿ ಈಗ ವರ್ಕ್ ಆಗುವುದಿಲ್ಲ. ಜನ ನಿರ್ಭಯವಾಗಿ ಬಂದು ಮತ ಹಾಕುತ್ತಾರೆ. ನಾನು ಕೂಡ ಮುಂದಿನ ದಿನಗಳಲ್ಲಿ ವರುಣದಲ್ಲಿ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಪ್ರಣಾಳಿಕೆ ಬಗ್ಗೆ ಸಿದ್ಧರಾಮಯ್ಯ ಟೀಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಮೊದಲು ಸಿದ್ದರಾಮಯ್ಯ ತಮ್ಮ ಸರ್ಕಾರದ ರಿಪೋರ್ಟ್ ಕಾರ್ಡ್ ಕೊಡಲಿ. ಅವರು ಎಷ್ಟು ಭರವಸೆ ಕೊಟ್ಟಿದ್ದರು, ಎಷ್ಟು ಈಡೇರಿಸಿದ್ದಾರೆ ಎಂಬುದನ್ನ ಅವರು ಹೇಳಿಲ್ಲ. ನಮ್ಮ ಕಾಲದಲ್ಲಿ ಕೋವಿಡ್ ಬಂತು, ಹೀಗಾಗಿ ಒಂದಿಷ್ಟು ವ್ಯತ್ಯಾಸಗಳಾಗಿದೆ. ಆದರೂ ನಾವು ಕೆಲವು ಮಾರ್ಪಡುಗಳೊಂದಿಗೆ ಜನರಿಗೆ ಸ್ಪಂದನೆ ಮಾಡಿದ್ದೇವೆ. ಇವತ್ತು ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನ ಕಾರ್ಯಗತ ಮಾಡಲು ಎಲ್ಲಾ ಪ್ಲಾನ್ ಮಾಡಿಕೊಂಡಿದ್ದೇವೆ. ಈ ಪ್ರಣಾಳಿಕೆಯಿಂದ ನಮ್ಮ ಸ್ಥಾನಗಳ ಸಂಖ್ಯೆಯೂ ಹೆಚ್ಚಾಗಬಹುದು ಎಂದು ಹೇಳಿದರು.
ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ಷೇಪಾರ್ಹ ಪದ ಬಳಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಪ್ರಿಯಾಂಕ್ ಖರ್ಗೆ ಅವರಿಂದ ಇನ್ನೇನನ್ನು ನಿರೀಕ್ಷೆ ಮಾಡಲು ಸಾಧ್ಯ. ಅವರ ತಂದೆ ಈ ಹಿಂದೆ ಮಾತನಾಡಿ ಆ ಮಾತನ್ನ ವಾಪಸ್ ಪಡೆದಿದ್ದರು ಎಂದು ಕಿಡಿಕಾರಿದರು.
Key words: Varuna- bjp-CM-Basavaraja bommai-congress