ELECTION-2023 : ತಾರಕಕ್ಕೇರಿದ ಆರೋಪ, ಪ್ರತ್ಯಾರೋಪ ಸಮರ..

 

ಬೆಂಗಳೂರು, ಮೇ 07, 2023 : (www.justkannada.in news ) ಕರ್ನಾಟಕ ರಾಜ್ಯ ವಿಧಾನಸಭಾ ಮೇ 10  ರ ಚುನಾವಣೆಯ ಬಹಿರಂಗ  ಪ್ರಚಾರ ನಾಳೆ ಅಂತ್ಯವಾಗಲಿದೆ.  ಮತದಾನ ಕ್ಕೆ ನಲವತ್ತೆಂಟು ಘಂಟೆಗೂ ಮೊದಲೇ ಬಹಿರಂಗ ಪ್ರಚಾರ ಕೊನೆಗೊಳ್ಳಬೇಕು ಎಂಬುದು ಚುನಾವಣೆ ಆಯೋಗದ ಕಾನೂನು.

ರಾಜ್ಯದ ಕೆಲವು ಪ್ರದೇಶಗಳಲ್ಲಿ, ಬೆಂಗಳೂರು ಸೇರಿದಂತೆ ವರುಣನ ಸಿಂಚನ ವಾಗಿದೆ. ಬೇಸಿಗೆಯ ಧಗೆ ಕೊಂಚ ಕಡಿಮೆಯಾಗಿದೆಯಾದರೂ, ಚುನಾವಣಾ ಪ್ರಚಾರದ ಕಾವು ಏರುಗತಿಯಲ್ಲೇ ಇದೆ. ಮತ ಸಮರದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳೂ, ಅವುಗಳ ಸ್ಟಾರ್ ಪ್ರಚಾರ ಕರು ತಮ್ಮ ತಮ್ಮ ಪಕ್ಷಗಳಿಗೆ ಮತ ಸೆಳೆಯುವ ಕಾಯಕದಲ್ಲಿ ತೊಡಗಿದ್ದಾರೆ.

ಬಿಜೆಪಿಯು ಪ್ರಧಾನಿ ಮೋದಿಯವರನ್ನೇ ತನ್ನ ಮತ ಗಳಿಕೆಗೆ ನಂಬಿಕೊಂಡಂತಿದೆ. ಮೋದಿಯವರು ಈಗಾಗಲೇ ಅಬ್ಬರದ ಪ್ರಚಾರ ಕೈಗೊಂಡು, ಕಾಂಗ್ರೆಸ್, ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಂತೆ. ಎರಡೂ ಪಕ್ಷಗಳು ಕುಟುಂಬ ಆಧಾರಿತ, ಭ್ರಷ್ಟಾಚಾರ ಮಾಡುವ ಪಕ್ಷಗಳು ಎಂದು ಅಬ್ಬರಿಸಿದ್ದಾರೆ. ಆದರೆ ತಮ್ಮ ಪಕ್ಷ ಕರ್ನಾಟಕದಲ್ಲಿ ಯಡಿಯೂರಪ್ಪ ಸೇರಿದಂತೆ ಎಷ್ಟು ಕುಟುಂಬಗಳಿಗೆ ಮಣೆ ಹಾಕಿದೆ ಎನ್ನುವುದನ್ನು ಮರೆತಿರುವಂತಿದೆ. ಆದರೆ ಜನ ಮರೆತಿರಲಾರರು.

ಯಾರೇ ಆಗಲಿ, ಯಾವ ಪಕ್ಷವೇ ಆಗಲಿ ತಾವು ಪ್ರತಿಪಾದಿಸುವ ಸಿದ್ದಾಂತ ಗಳಿಗೆ ಬದ್ದ ರಾಗಿರಬೇಕು. ಅದಲ್ಲದೆ, ಬೇರೆಯವರಿಗೆ ಬೋಧಿಸುವುದರಲ್ಲಿ ಅರ್ಥ ವಿರದು. ಬಿಜೆಪಿಯ ಕುಟುಂಬ ರಾಜಕಾರಣ ದ ಸಿದ್ದಾಂತ ವೂ  ಹೀಗೆ. ತಾನು ಮಾಡಿದರೆ ತಪ್ಪಲ್ಲಾ, ಬೇರೆ ಯವರು ಮಾಡಿದರೆ ಅಪರಾಧ.

ಈ ಬಾರಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಮಾಧ್ಯಮದ ಮೂಲಕ ಆರೋಪ, ಪ್ರತ್ಯಾರೋಪಗಳ ಸುರಿಮಳೆಯನ್ನೆ ಸುರಿಸುತ್ತಿವೆ. ಬಿಜೆಪಿ ನಡೆಸಿರುವ ಭ್ರಷ್ಟಾಚಾರ ಗಳನ್ನು ಪಟ್ಟಿ ಮಾಡಿ, ಕಾಂಗ್ರೆಸ್ ಜಾಹಿರಾತು ನೀಡಿ ಪ್ರಕಟಿಸಿದರೆ, ಬಿಜೆಪಿ ಸಹ ಇದೇ ತಂತ್ರ ಅನುಸರಿಸಿದೆ. ವಿದ್ಯುನ್ಮಾನ ಮಾಧ್ಯಮ ದಲ್ಲಂತೂ ಇದೇ ಸಮರ ಮುಂದುವರೆದಿದೆ.

ಪ್ರಧಾನಿ ಮೋದಿಯವರು ಈಗಾಗಲೇ ಹಲವು ಸುತ್ತಿನ ಪ್ರಚಾರ ಕೈಗೊಂಡಿದ್ದಾರೆ. ಅವರ ಚುನಾವಣಾ ಭಾಷಣ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಟಿಕಿಸುವುದಕ್ಕೆ ಮಾತ್ರ ಸೀಮಿತವಾಗಿದ ಎನಿಸದೆ ಇರದು. ಮೋದಿಯವರು ತಮ್ಮ ನೇತೃತ್ವದ ಕೇಂದ್ರ ಸರ್ಕಾರ ಈ ಒಂಬತ್ತು ವರ್ಷದಲ್ಲಿ ಮಾಡಿರುವ ಸಾಧನೆ ಯಾ ಅಭಿವೃದ್ಧಿ ಯ ಬಗ್ಗೆ ಇದುವರೆವಿಗೂ ಜನತೆಯ ಮುಂದೆ ಇಟ್ಡ ಉದಾಹರಣೆ ಕಡಿಮೆ. ಪ್ರದಾನಿಯವರು ತಮ್ಮದೆ ಡಬಲ್ ಇಂಜಿನ್ ನ ಮತ್ತೊಂದು ರೈಲು, ಬಸವರಾಜ ಬೊಮ್ಮಾಯಿ ಸರ್ಕಾರದ ಸಾದನೆಗಳನ್ನು ಸಹ ಮತದಾರರ ಮುಂದೆ ಇಡುತ್ತಿಲ್ಲಾ. ಬರೇ ಅರೋಪಗಳೆ ಅವರ ಬಾಷಣದ ಸರಕು.

ಇನ್ನು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಿಜೆಪಿ ಯ ಭ್ರಷ್ಟಾಚಾರ ವನ್ನೆ ತಮ್ಮ ಪ್ರಮುಖ ಚುನಾವಣಾ ಅಸ್ತ್ರ ವನ್ನಾಗಿಸಿಕೊಂಡು, ಹಲವಾರು, ಗ್ಯಾರಂಟಿ, ಭರವಸೆಗಳನ್ನು ಮತದಾರರಿಗೆ ನೀಡಿವೆ. ಈ ಎರಡೂ ಪಕ್ಷಗಳೂ ನೀಡಿರುವ ಭರವಸೆಗಳು ಪೊಳ್ಳು ಎಂದು ಬಿಜೆಪಿ ತಿರುಗೇಟು ನೀಡುವುದನ್ನು ಮರೆತಿಲ್ಲಾ.

ಕರ್ನಾಟಕದಲ್ಲಿ ಈ ಬಾರಿ ಚುನಾವಣೆಯ ವಿಷಯ ಯಾವುದು, ಅಭಿವೃದ್ಧಿ ಯೇ, ಭ್ರಷ್ಟಾಚಾರ ವೇ, ಅಥವಾ ಭರವಸೆಗಳೇ ಎನ್ನುವುದು ಮತದಾರ ನಿರ್ದರಿಸಬೇಕಾಗಿದೆ.

ಪ್ರಧಾನಿ ಮೋದಿಯವರು ನಿನ್ನೆ ಮತ್ತು ಇಂದು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ. ಮೋದಿಯವರ ರೋಡ್ ಶೋ ಪ್ರಚಾರ ಗಿಟ್ಟಿಸಿದ್ದಕ್ಕಿಂತ, ಜನರಿಂದ ಆಕ್ರೋಶ ಪಡೆದುದೆ ಹೆಚ್ಚು ಅನಿಸುತಿದೆ. ಪ್ರದಾನಿಯವರು ರೋಡ್ ಶೋ ನಡೆಸಿದ ಪ್ರದೇಶದಲ್ಲಿ ಜನರ ಪಟ್ಟ ಪಾಡು ಬಹಳ.

ಕಾಂಗ್ರೆಸ್ ನ  ಅಧಿನಾಯಕಿ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ, ಪುತ್ತಿ ಪ್ರಿಯಾಂಕಾ ಗಾಂಧಿ ಈ ಬಾರಿ ಬಿರುಸಾದ ಪ್ರಚಾರ ಮಾಡಿದ್ದಾರೆ.

ಕೆಲವು ಸಮಿಕ್ಷೆಗಳು, ಅವು ಬಿಜೆಪಿ ಬೆಂಬಲಿತ ಸಮಿಕ್ಷೆಗಳೂ ಸ್ವಯಂ ಸಮಿಕ್ಷೆಗಳೋ ತಿಳಿಯದು, ಈ ಬಾರಿ ಅತಂತ್ರ ಫಲಿತಾಂಶ, ಬಿಜೆಪಿ, ಕಾಂಗ್ರೆಸ್ ದೊಡ್ಡ ಪಕ್ಷಗಳಾಗಿ ಹೊರ ಹೊಮ್ಮಲಿವೆ ಎಂದು ಕೆಲವು ಸಮೀಕ್ಷೆ ಗಳು ಪ್ರತಿಪಾದಿಸಿದರೆ, ಇನ್ನೂ ಕೆಲವು ಕಾಂಗ್ರೆಸ್ ಗೆ ಬಹುಮತ ನಿಶ್ಚಿತ ಎಂದಿವೆ.

91 ರ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ದೇವೇಗೌಡರು, ತಮ್ಮ ಅನಾರೋಗ್ಯ ವನ್ನೂ ಲೆಕ್ಕಿಸದೆ, ಹಳೆ ಮೈಸೂರು ಜಿಲ್ಲೆಗಳಲ್ಲಿ ಪ್ರಚಾರ ನಡೆಸಿ ತಮ್ಮ ಪುತ್ತ ಕುಮಾರಸ್ವಾಮಿ ಯ ಕೈ ಬಲ ಪಡಿಸಿದರೆ. ಜೆಡಿಎಸ್ ಗೆ ಕುಮಾರಸ್ವಾಮಿ ಯವರೇ ಏಕೈಕ ಸ್ಟಾರ್ ಪ್ರಚಾರಕ ಮತ್ತು ಏಕೈಕ ಪ್ರಚಾರಕ ಸಹ.

ಬಹುತೇಕ ಕಡೆ ಜನ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಸಮಾನ್ಯ ನ ಬದುಕು ಎಷ್ಟು ತ್ರಾಸವಾಗಿದೆ ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ.

ಪ್ರದಾನಿಯವರು ಎಲ್ಲಿಯೂ ತಮ್ಮ ಚುನಾವಣಾ ಪ್ರಚಾರದ ಭಾಷಣದಲ್ಲಿ ಬೆಲೆ ಏರಿಕೆ, ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಕೇಳಿ ಬಂದ 40 ಪರ್ಸೆಂಟ್ ಕಮಿಷನ್‌ ಬಗ್ಬೆ ಪ್ರಸ್ತಾಪಿಸಲೆ ಇಲ್ಲಾ.

ಮೇ 10 ರಂದು ಮತದಾರ ತೀರ್ಪುನೀಡುವ. ಮತದಾರ ನೀಡಿದ ತೀರ್ಪೇನು ಎಂದು ಮೇ 13 ರಂದು ಪ್ರಕಟವಾಗಲಿದೆ.

M.SIDDARAJU, SENIOR JOURNALIST

-ಎಂ. ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು.

Key words : Karnataka-election-2023-bangalore-bjp-congress-jds