ಬೆಂಗಳೂರು,ಆ,27,2019(www.justkannada.in): ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಇಂದು ಸಂಸದ ನಳೀನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕರಿಸಿದರು.
ನಗರದ ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪದಗ್ರಹಣ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದರು.
ಪದಗ್ರಹಣ ಕಾರ್ಯಕ್ರಮಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೇಸರಿ ಉಡುಪನ್ನ ಧರಿಸಿ ಮಲ್ಲೇಶ್ವರಂನ ಕಾಡು ಮಲ್ಲೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಆನಂತರ ಮೆರವಣಿಗೆಯ ಮೂಲಕ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಆಗಮಿಸಿ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ , ನಾನು ವಿದ್ವಾಂಸನಲ್ಲ, ಪಂಡಿತನಲ್ಲ. ಸಂಘದ ಸಾಮಾನ್ಯ ಕಾರ್ಯಕರ್ತ. ಸಂಘದ ಕಾರ್ಯಕರ್ತರು ನನಗೆ ಬೆಳೆಸಿದ್ದಾರೆ. ನಾನು ಆಡ್ತಾ ಆಡ್ತಾ ಬೆಳೆದೆ. ಇವತ್ತು ನನಗೆ ಜವಾಬ್ದಾರಿ ಸ್ಥಾನ ಕೊಟ್ಟಿದ್ದಾರೆ. ರಾಜ್ಯಾಧ್ಯಕ್ಷ ನಾಗಿರುವ ಸಂತಸ ಮತ್ತೊಂದಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ನನಗೆ ನೀಡಿರುವ ಜವಾಬ್ದಾರಿಯನ್ನ ಎಚ್ಚರಿಕೆಯಿಂದ ನಿಭಾಯಿಸ್ತೇನೆ. ನನ್ನಲ್ಲಿ ಭಯವೂ ಇದೆ, ಆತ್ಮವಿಶ್ವಾಸವೂ ಇದೆ. ಯಡಿಯೂರಪ್ಪರಂತಹ ನಾಯಕರ ಆಶಿರ್ವಾದ ನನ್ನ ಮೇಲಿದೆ. ಯಡಿಯೂರಪ್ಪ, ಈಶ್ವರಪ್ಪ, ಅನಂತ್ ಕುಮಾರ್ ರಂಥವರ ಪರಿಶ್ರಮದಿಂದ ಪಕ್ಷ ಬೆಳೆದು ಬಂದಿದೆ. ಯಡಿಯೂರಪ್ಪ ಜಿಲ್ಲೆಜಿಲ್ಲೆಗೂ ಓಡಾಡಿ ಪ್ರವಾಹ ಸಂತ್ರಸ್ತರ ಕಷ್ಟ ಆಲಿಸ್ತಿದ್ದಾರೆ. ಯಡಿಯೂರಪ್ಪ ಜೊತೆ ಪಕ್ಷ, ಕಾರ್ಯಕರ್ತರು ಇದ್ದಾರೆ ಸಿಎಂ ಬಿಎಸ್ ವೈರನ್ನ ಹೊಗಳಿದರು.
Key words: Nalin Kumar Kateel- sworn – as new- BJP -president