ಮೈಸೂರು,ಮೇ,13,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಬಹುಮತ ಪಡೆದುಕೊಂಡು ಅಧಿಕಾರಕ್ಕೇರಲು ಸಜ್ಜಾಗಿದ್ದು, ಈ ನಡುವೆ ವರುಣಾದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯರನ್ನ ಸೋಲಿಸಲೇಬೇಕೆಂದು ವಿ.ಸೋಮಣ್ಣರನ್ನ ಕಣಕ್ಕಿಳಿಸಿದ್ದ ಬಿಜೆಪಿ ನಾಯಕರಿಗೆ ಕೊನೆಗೂ ಮುಖಭಂಗವಾಗಿದೆ.
ಜಾತಿ ಮತ್ತು ಹಣಬಲದ ಮೇಲೆ ಚುನಾವಣಾ ಕಣವನ್ನು ರೋಚಕಗೊಳಿಸಿದ್ದ ಬಿಜೆಪಿ ನಾಯಕ, ಸಚಿವ ವಿ .ಸೋಮಣ್ಣ ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋತಿದ್ದಾರೆ. ಬೆಂಗಳೂರಿನ ಗೋವಿಂದರಾಜನಗರದ ಬದಲು ಚಾಮರಾಜನಗರದಲ್ಲಿ ಟಿಕೆಟ್ ನೀಡುವಂತೆ ಸೋಮಣ್ಣ ಪಕ್ಷವನ್ನು ಕೇಳಿದ್ದರು. ಆ ಬೇಡಿಕೆ ಈಡೇರಿಸಿದ ಹೈ ಕಮಾಂಡ್ ಜೊತೆಗೆ ‘ವರುಣ’ದ ಭಾರವನ್ನೂ ಹೊರಿಸಿತು.
ಎರಡೆರಡು ಕ್ಷೇತ್ರಕ್ಕೆ ಟಿಕೆಟ್ ಘೋಷಣೆಯಾದಾಗ ‘ಬೆಚ್ಚಿಬಿದ್ದಂತೆ’ ತೋರಿದ ಸೋಮಣ್ಣ ಕ್ರಮೇಣ ಸುಧಾರಿಸಿಕೊಂಡು, ‘ಗೋವಿಂದರಾಜನಗರ ಅಭಿವೃದ್ಧಿ ಮಾದರಿ’ ಮಂತ್ರದೊಂದಿಗೆ ಅಖಾಡಕ್ಕಿಳಿದರು. ಗೋವಿಂದ ರಾಜನಗರ ಅಭಿವೃದ್ಧಿ ಮಾಡಿದ್ದರೆ ಅಲ್ಲೆ ನಿಲ್ಲಬೇಕಿತ್ತು; ಇಲ್ಯಾಕೆ ಬಂದಿರಿ. ಅಲ್ಲಿ ಸೋಲುವ ಭಯ ಇತ್ತೇ? ಅಲ್ಲಿ ಒಳ್ಳೆಯ ಕೆಲಸ ಮಾಡಿದ್ದರೆ ಆ ಭಯ ಯಾಕೆ ಎನ್ನುವ ಕ್ಷೇತ್ರದ ಜನರ ಪ್ರಶ್ನೆಗೆ ಉತ್ತರ ಹೇಳುವಲ್ಲಿ ಸೋಮಣ್ಣ ಸೋತರು.
ಎರಡೂ ಕ್ಷೇತ್ರದಲ್ಲಿ ಬಹುಸಂಖ್ಯಾತ; ನಿರ್ಣಾಯಕ ಎನ್ನಲಾಗಿದ್ದ ಲಿಂಗಾಯತ ಸಮುದಾಯ ತಮ್ಮ ಜೊತೆಗಿರುತ್ತದೆ ಎನ್ನುವ ನಂಬಿಕೆ ಅವರದಾಗಿತ್ತು. ಲಿಂಗಾಯಿತ ಸಮುದಾಯವೊಂದನ್ನೆ ಹೆಚ್ಚು ಕೇಂದ್ರೀಕರಿಸಿ, ಮತ ಕೇಳಿದ್ದು ಉಳಿದ ಸಮುದಾಯಗಳ ಮತ ಕಾಂಗ್ರೆಸ್ ಪರ ಕ್ರೂಢೀಕರಣಗೊಳ್ಳಲು ಕಾರಣವಾಯಿತು. ಎಲ್ಲ ಸಮುದಾಯದವರಿಗೂ ಭರಪೂರ ಭರವಸೆ; ಹಣ ನೀಡಿದ್ದೇವೆ ಎನ್ನುವುದೇ ಸೋಮಣ್ಣ ಪಡೆಯ ಉಮೇದಿಗೆ ಕಾರಣವಾಗಿತ್ತು. ಆದರೆ, ಎರಡೂ ಪಕ್ಷಗಳಿಂದ ಹಣ ಪಡೆದ ಜನ ತಮ್ಮದೇ ‘ನಿರ್ಣಯ’ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಸುಲಭ್ಯ ಸಾಧ್ಯವಾಗಿದ್ದ ವರುಣಾ ಕ್ಷೇತ್ರ ಸೋಮಣ್ಣ ಸ್ಪರ್ಧೆಯಿಂದ ತೀವ್ರ ಸೆಣಸಿನ ಅಖಾಡವಾಯಿತು. ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ ಮೂರ್ನಾಲ್ಕು ದಿನ ಕ್ಷೇತ್ರ ಸಂಚಾರ ಮಾಡಬೇಕಾಯಿತು. ಸೊಮಣ್ಣ ‘ ಹಣಬಲ’ ಕ್ಕೆ ತಕ್ಕಂತೆ ಇವರೂ ಹಣ ಹರಿಸಬೇಕಾಯಿತು. ಆದರೆ, ಅಂತಿಮವಾಗಿ ಸೋಮಣ್ಣ ‘ಹರಕೆಯ ಕುರಿ’ಯೇ ಆದರು.
– ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ವಿರುದ್ದ ಸ್ವಜಾತಿಯ ಸೋಮಣ್ಣನನ್ನು ಎತ್ತಿಕಟ್ಟಿ ಆಟ ನೋಡಿದ್ದ ಬಿ.ಎಲ್.ಸಂತೋಷ್ ಪಡೆ, ಆ ‘ಆಟ’ದ ಭಾಗವಾಗಿಯೇ ಸೋಮಣ್ಣ ಅವರನ್ನು ಇಲ್ಲಿ ತಂದು ನಿಲ್ಲಿಸಿದ್ದರು. ಲಿಂಗಾಯತರ ನಾಯಕ ಯಡಿಯೂರಪ್ಪ ಮಾತ್ರವಲ್ಲ, ಸೋಮಣ್ಣ ಕೂಡ ಆ ಸಮುದಾಯದ ನಾಯಕ ಎಂದು ಬಿಂಬಿಸುವ ತಂತ್ರ ಅವರದಾಗಿತ್ತು. ಆ ತಂತ್ರಕ್ಕೆ ಯಡಿಯೂರಪ್ಪ ಅಭಿಮಾನಿ ಪಡೆ ಪ್ರತಿತಂತ್ರ ಹೆಣೆದು, ನಾಜೂಕಾಗಿ ನಿರ್ವಹಿಸಿದ್ದು ಫಲಿತಾಂಶದಲ್ಲಿ ವ್ಯಕ್ತವಾಗಿದೆ.
ಯಡಿಯೂರಪ್ಪ ಮತ್ತು ವಿಜಯೇಂದ್ರ ಸೋಮಣ್ಣ ಪರ ಇಲ್ಲ. ಎರಡೂ ಕ್ಷೇತ್ರ ಗಳಲ್ಲಿ ಅವರನ್ನು ಸೋಲಿಸಲು ತೆರೆ ಮರೆಯಲ್ಲಿ ಸಂದೇಶ ರವಾನಿಸಿದ್ದಾರೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಹರಿದಾಡುತ್ತಿತ್ತು. ಅದನ್ನು ಅಲ್ಲಗಳೆಯುವಂತ ‘ಚರ್ಚೆ”ಯನ್ನು ಹುಟ್ಟು ಹಾಕುವಲ್ಲಿ ಸೋಮಣ್ಣ ಪಡೆ ಸೋತಿತು. ಬದಲು, ವಿಜಯೇಂದ್ರ ಅಭಿಮಾನಿಗಳ ಮೇಲೆ ‘ನಿಗಾ’ ಇಡಲು ಹೋಗಿ ಒಳ ಹೊಡೆತ ಅನುಭವಿಸಿದರು.
ಮೈಸೂರು -ಕೊಡಗು ಸಂಸತ್ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದ ಪ್ರತಾಪ ಸಿಂಹ ತಮ್ಮ ವ್ಯಾಪ್ತಿಗೆ ಸೇರದ ವರುಣಾ, ಚಾಮರಾಜನಗರ ಕ್ಷೇತ್ರಗಳಲ್ಲಿ ಸೋಮಣ್ಣ ‘ ಎಡ-ಬಲ’ದಲ್ಲಿ ನಿಂತುಕೊಂಡು, ನೀಡಿದ ‘ವಿವಾದಾತ್ಮಕ” ಹೇಳಿಕೆಗಳು, ಮಾಡಿದ ಎಡವಟ್ಟುಗಳು ಆರಂಭದಲ್ಲೇ ಸೋಮಣ್ಣಗೆ ಹಿನ್ನಡೆ ಉಂಟು ಮಾಡಿದವು.
ಸಿಂಹ ಅವರ ರಾಜಕೀಯ ‘ಪ್ರತಾಪ”, ಜಾತಿ-ಜಾತಿಗಳನ್ನು ಎತ್ತಿಕಟ್ಟಿ, ಗದ್ದಲ ಎಬ್ಬಿಸಿ ಅದರಲ್ಲಿ ಮತ ಫಸಲು ತೆಗೆಯುವ ‘ರಾಜಕೀಯ ಅಪಸವ್ಯ’ಗಳು ತಮಗೇ ಮಗ್ಗುಲ ಮುಳ್ಳಾಗುತ್ತದೆ ಎಂದು ಅರಿತು, ಅವರನ್ನು ‘ ದೂರ’ ಇಟ್ಟರಾದರೂ ಆ ವೇಳೆಗಾಗಲೇ ಕಾಲ ಮೀರಿತ್ತು. ಪ್ರತಾಪ ಅವರಂತ ಸ್ವಪಕ್ಷೀಯರು ಮತ್ತು ಹಿಂಬಾಲಕರು ಸೃಷ್ಟಿಸಿದ ಅವಾಂತರಗಳನ್ನು ಸರಿಪಡಿಸಿಕೊಳ್ಳಲು ಆಗಲೇ ಇಲ್ಲ.
ಗೋವಿಂದರಾಜನಗರದಿಂದ ಬಂದ ಸೋಮಣ್ಣ ಚುನಾವಣಾ ಉಸ್ತುವಾರಿ ಮತ್ತು ಸಂಪನ್ಮೂಲ ಹಂಚಿಕೆ ಹೊಣೆಯನ್ನು ಕ್ಷೇತ್ರದವರಲ್ಲದ ಹೊರಗಿನ ‘ನಂಬಿಕಸ್ಥರಿಗೆ’ ವಹಿಸಿದ್ದರು. ಇದು ಪಕ್ಷದ ಸ್ಥಳೀಯ ನಾಯಕರು, ಮುಖಂಡರಿಗೆ ಬೇಸರ ತರಿಸಿತ್ತು. ಹಣ ಪಡೆದ ಅನೇಕರು ಹೊರ ನೋಟಕ್ಕೆ ‘ಹವಾ’ ಸೃಷ್ಟಿಸಿ, ಒಳಗೇ ಹೊಡೆತ ಕೊಟ್ಟರು.
ನಾನು ಕೂಡ ಕಿಲಾಡಿ ರಾಜಕಾರಣಿ’ ಎಂದು ಸೋಮಣ್ಣ ಹೇಳಿಕೊಂಡಿದ್ದರು. ಅವರ ಯಾವ ಕಿಲಾಡಿತನಗಳೂ ಇಲ್ಲಿ ‘ಫಲ’ ನೀಡಲಿಲ್ಲ. ಸಿದ್ದರಾಮಯ್ಯ ಅವರ ಮಾತಿರಲಿ, ಪುಟ್ಟರಂಗಶೆಟ್ಟಿ ಅವರಂತ ‘ ಸಾಮಾನ್ಯರಲ್ಲಿ ಸಾಮಾನ್ಯ’ ಎನ್ನುವಂತ ರಾಜಕಾರಣಿಯನ್ನು ಮಣಿಸುವಲ್ಲಿಯೂ ಅವರು ಸೋತಿದ್ದಾರೆ. ಈ ಎಲ್ಲ ದೃಷ್ಟಿಯಲ್ಲಿ ನೋಡಿದರೆ,’ಸೋಮಣ್ಣ ಅವರನ್ನು ಹರಕೆಯ ಕುರಿ ಮಾಡಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ,’ ಎನ್ನುವ ಕಾಂಗ್ರೆಸ್ ಆರೋಪ ಬಹುತೇಕ ದಿಟವಾಗಿದೆ.
Key words: varuna-chanarajanagar-V.Somanna-lose