ಬೆಂಗಳೂರು,ಮೇ,30,2023(www.justkannada.in): ಹಿಂದಿನ ಬಿಜೆಪಿ ಸರ್ಕಾರ ಶಾಲಾ ಪಠ್ಯ ಪುಸ್ತಕಗಳಲ್ಲಿ ಸೇರಿಸಿದ ವಿಷಯಗಳನ್ನು ತೆಗೆದುಹಾಕಬೇಕೆಂಬ ಒತ್ತಾಯ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಂತ ಹಂತವಾಗಿ ಶಾಲಾ ಪಠ್ಯ ಪರಿಷ್ಕರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪಠ್ಯ ಪರಿಷ್ಕರಣೆ ಬಗ್ಗೆ ಈಗಾಗಲೇ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಹಂತ ಹಂತವಾಗಿ ಶಾಲಾ ಪಠ್ಯ ಪರಿಷ್ಕರಣೆ ಮಾಡುತ್ತೇವೆ. ಮಕ್ಕಳ ಮನಸಿಗೆ ಕಲ್ಮಶ ತುಂಬುವ ಯಾವುದೇ ಪಠ್ಯ ಇದ್ದರೂ ಅದನ್ನ ಬದಲಾವಣೆ ಮಾಡುತ್ತೇವೆ. ಪರಿಷ್ಕರಣೆ ಪ್ರಕ್ರಿಯೆ ಶುರು ಮಾಡುತ್ತೇವೆ. ಸಿಎಂ, ಡಿಸಿಎಂ ಮಾರ್ಗದರ್ಶನ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದು, ಅವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಹಿಜಾಬ್ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಹಿಜಾಬ್ ವಿಚಾರವಾಗಿ ಕೆಲವೊಂದು ಕಾನೂನು ತೊಡಕುಗಳಿವೆ. ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿ ಕ್ರಮ ಕೈಗೊಳ್ಳುತ್ತೇವೆ. ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಕಾನೂನು ಹೋರಾಟ ನಡೆಸುತ್ತೇವೆ ಎಂದರು.
ಶಾಲಾ ಪ್ರಾರಂಭ ಹಿನ್ನೆಲೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಧು ಬಂಗಾರಪ್ಪ ತಿಳಿಸಿದರು.
Key words: Education Minister -Madhu Bangarappa- reaction – about- school -curriculum