ಜೂನ್ ತಿಂಗಳಲ್ಲಿ10 ಕೆ.ಜಿ ಅಕ್ಕಿ ಕೊಡದಿದ್ದರೆ ಜನ ಸಂಘಟಿಸಿ ಹೋರಾಟ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ.

ಬೆಂಗಳೂರು,ಜೂನ್,15,2023(www.justkannada.in): ಜೂನ್ ತಿಂಗಳಲ್ಲಿ10 ಕೆ.ಜಿ ಅಕ್ಕಿ ಕೊಡದಿದ್ದರೆ ಜನ ಸಂಘಟಿಸಿ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ  ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಮೋಹನ್, ಪರಿಷತ್ ಸದಸ್ಯ ರವಿಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಈ ವೇಳೆ ಮಾತನಾಡಿದ  ಬಸವರಾಜ ಬೊಮ್ಮಾಯಿ, ಅನ್ನಭಾಗ್ಯ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಬಡಜನರಿಗೆ ಅನ್ಯಾಯವಾಗುತ್ತಿದೆ. ಅಕ್ಕಿ ಸರಬರಾಜು ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಆರೋಪ ಸುಳ್ಳು. ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರ ಸಾಗಾಣೆ ವೆಚ್ಚವನ್ನೂ ರಾಜ್ಯ ಸರ್ಕಾರದ ಮೇಲೆ ಹಾಕದೇ ಅಕ್ಕಿ ಪೂರೈಕೆ ಮಾಡುತ್ತಿದೆ.  ಬಿಪಿಎಲ್ ಕಾರ್ಡ್ ಪಡಿತರದಾರರಿಗೆ ಕೇಂದ್ರ ಅಕ್ಕಿ ಪೂರೈಸುತ್ತಿದೆ. ನಾನು ಸಿಎಂ ಆಗಿದ್ದಾಗಲೇ FCI ಮೇಲೆ ಅವಲಂಬಿತರಾಗುವುದು ಬೇಡ ಎಂದು ಅಧಿಕಾರಿಗಳಿಗೆ ಹೇಳಿದ್ದೆ. ಈಗ FCI ನವರು ಕೊಡುತ್ತೇನೆ ಎಂದು ಹೇಳಿದ್ರು. ಕೊಡ್ತಿಲ್ಲ ಅಂತ ಆರೋಪ ಮಾಡುತ್ತಾ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಜನತೆಗೆ ಮೋಸ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.cm bommai

ಅಧಿಕಾರಕ್ಕೆ ಬಂದ ಕೂಡಲೇ ಟೆಂಡರ್ ಕರೆಯದೇ ನಿರ್ಲಕ್ಷ್ಯ ಮಾಡಿ ಈಗ ಅಕ್ಕಿ ವಿತರಣೆ ಕಾಲ ಸಮೀಪಿಸಿದಾಗ ಕೇಂದ್ರದ ವಿರುದ್ಧ ಆರೋಪ ಮಾಡುವುದು ಬೇಡ. ಅನ್ಯ ರಾಜ್ಯಗಳು, ಬೇರೆ ಏಜೆನ್ಸಿಯಿಂದ ಅಕ್ಕಿ ಪಡದು ಈ ತಿಂಗಳು ಮಾತು ಕೊಟ್ಟಂತೆ ಅಕ್ಕಿ ಕೊಡಬೇಕು. ಅಥವಾ ಪಡಿತರದಾರರ ಖಾತೆಗೆ ಹಣ ಹಾಕಬೇಕು ಎಂದು ಒತ್ತಾಯಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದರು.

Key words: 10 kg -rice – not- given -protest- Former CM -Basavaraja Bommai