ಮೈಸೂರು,ಜುಲೈ,1,2023(www.justkannada.in): ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಸೈಬರ್ ಕ್ರೈಮ್ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲೂ ಸೈಬರ್ ಕ್ರೈಮ್ ಸಂಖ್ಯೆ ಹೆಚ್ಚಳವಾಗಿದ್ದು, ಸೈಬರ್ ಕ್ರೈಮ್ ತಡೆಯಲು ಕಾಯಕಲ್ಪ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಮಾತನಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್, ಸೈಬರ್ ಕ್ರೈಮ್ ಹಾಗೂ ಫೇಕ್ ನ್ಯೂಸ್ ತಡೆಗಟ್ಟಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ರಾಜ್ಯದಲ್ಲೂ ಸೈಬರ್ ಕ್ರೈಮ್ ಸಂಖ್ಯೆ ಹೆಚ್ಚಳವಾಗಿದೆ. ಸೈಬರ್ ವಿಭಾಗವನ್ನು ಹೆಚ್ಚು ಕ್ರಿಯಾಶೀಲಗೊಳಿಸುತ್ತೇವೆ. ಜೊತೆಗೆ ಫೇಕ್ ನ್ಯೂಸ್ ಬೇರೆ ಬೇರೆ ರೀತಿಯಲ್ಲಿ ಹಾಕುತ್ತಿದ್ದಾರೆ. ರಾಜಕೀಯವಾಗಿ, ಸಮಾಜದ ಶಾಂತಿ ಕದಡಲು ಫೇಕ್ ನ್ಯೂಸ್ ಹಾಕುತ್ತಿದ್ಧಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಫೇಕ್ ನ್ಯೂಸ್ ತಡೆಗೆ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಕಾನೂನು ರೀತಿ ಕ್ರಮ ಕೈಗೊಳ್ಳಾಗುತ್ತದೆ ಎಂದು ತಿಳಿಸಿದರು.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸಲು ಕರೆ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ವಿರೋಧ ಪಕ್ಷದವರನ್ನು ಧರಣಿ ಮಾಡಬೇಡಿ ಎಂದು ಯಾರು ಹೇಳಿಲ್ಲ. ಧರಣಿ ಕೂರಬೇಡಿ ಎಂದು ಯಾರು ಹೇಳಿಲ್ಲ. ಅವರು ಯಾವ ಕಾರಣಕ್ಕೆ ಧರಣಿ ಮಾಡಿದರೂ ನಾವು ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದರು.
ಇನ್ನು ಪಿಎಸ್ ಐ ನೇಮಕಾತಿ ಹಗರಣದ ತನಿಖೆ ಪ್ರಗತಿಯಲ್ಲಿದ್ದು, ಅಕ್ರಮದಲ್ಲಿ ಭಾಗಿಯಾಗದ 500ಕ್ಕೂ ಹೆಚ್ಚು ಮಂದಿ ನ್ಯಾಯಾಲಯದ ಮೊರೆ ಹೋಗಿದ್ಧಾರೆ. ಈ ಹಿಂದಿನ ಸರ್ಕಾರ ಮರು ಪರೀಕ್ಷೆ ನಡೆಸಲು ಮುಂದಾಗಿತ್ತು. ಅದಕ್ಕೂ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ. ಬಡ್ತಿ ನೀಡಿರುವ ಪರಿಣಾಮ ಬಹುತೇಕ ಎಸ್ ಐ ಹುದ್ದೆಗಳು ಖಾಲಿ ಬಿದ್ದಿವೆ. 1 ಸಾವಿರ ಎಸ್ ಐ ಹುದ್ದೆಗಳನ್ನು ಭರ್ತಿ ಮಾಡುವ ಅವಶ್ಯಕತೆ ಇದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು.
Key words: Necessary- action – prevent- cyber crime – state – Home Minister- Dr. G. Parameshwar